ಕ್ರಿಕೆಟಿಗ ರೈನಾ ಕೊರಳಿಗೆ ಸುತ್ತಿಕೊಂಡ ಹಳೆಯ ಮ್ಯಾಚ್ ಫಿಕ್ಸಿಂಗ್ ಉರುಳು
ಹೊಸದಿಲ್ಲಿ, ಮಾ.31: ಭಾರತ ಕ್ರಿಕೆಟ್ ತಂಡದ ಆಟಗಾರ ಸುರೇಶ್ ರೈನಾ ವಿರುದ್ಧದ ಹಳೆಯ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಮತ್ತೊಮ್ಮೆ ಚರ್ಚೆಗೊಳಗಾಗಿದೆ.
ಭಾರತ ಇಂದು ಮುಂಬೈನಲ್ಲಿ ವೆಸ್ಟ್ ಇಂಡಿಸ್ ವಿರುದ್ಧ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯದ ಸೆಮಿಫೈನಲ್‌ಗೆ ಸಿದ್ದತೆ ನಡೆಸುತ್ತಿರುವಾಗಲೇ ತಂಡದ ಆಟಗಾರ ರೈನಾ ವಿರುದ್ಧದ ಐದು ವರ್ಷಗಳ ಹಿಂದಿನ ಆರೋಪಕ್ಕೆ ಮರುಜೀವ ಬಂದಿದೆ. ಇದರೊಂದಿಗೆ ರೈನಾ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ.
ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿ ಪ್ರಕಾರ ರೈನಾ ಅವರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಈ ಹಿಂದೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ತನಿಖೆಗೊಳಪಡಿಸಿತ್ತು. ರೈನಾ ಅವರು ಬುಕ್ಕಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಹಿಳೆ ಜೊತೆ ಕಾಣಿಸಿಕೊಂಡ ಬಳಿಕ ಅವರನ್ನು ತನಿಖೆಗೊಳಪಡಿಸಲಾಗಿತ್ತು.
ತನಿಖೆ ಆರಂಭಗೊಂಡ ವರ್ಷದ ಬಳಿಕ ಶ್ರೀಲಂಕಾ ಪಾರ್ಲಿಮೆಂಟ್‌ನಲ್ಲಿ ಯುಎನ್‌ಪಿ ಕೊಲಂಬೊ ಜಿಲ್ಲಾ ಎಂಪಿ ಎಸ್‌ಎಂ ಮಾರಿಕ್ಕರ್ ಅವರು ರೈನಾ ವಿರುದ್ಧದ ಪ್ರಕರಣವನ್ನು ಪ್ರಸ್ತಾಪಿಸಿದ್ಧಾರೆ. ಇದರೊಂದಿಗೆ ಮತ್ತೊಮ್ಮೆ ಈ ಪ್ರಕರಣ ಚರ್ಚೆಗೆ ಬಂದಿದೆ.
ರೈನಾ ಬಗ್ಗೆ ಎಂಪಿ ಎಸ್‌ಎಂ ಮಾರಿಕ್ಕರ್ ಪಾರ್ಲಿಮೆಂಟ್‌ನಲ್ಲಿ ಎತ್ತಿದ ಪ್ರಶ್ನೆ ಪಾರ್ಲಿಮೆಂಟ್‌ನ ಕಲಾಪದ ಪುಸ್ತಕದಲ್ಲಿ ದಾಖಲಾಗಿದೆ . ಮಾರಿಕ್ಕರ್ 2010ರಲ್ಲಿ ರೈನಾ ಅವರ ಫಿಕ್ಸಿಂಗ್ ಆರೋಪದ ತನಿಖೆಯ ಪ್ರಗತಿಯ ಬಗ್ಗೆ ಕ್ರೀಡಾಸಚಿವರಲ್ಲಿ ಮಾಹಿತಿ ಬಯಸಿದ್ದರು.