ಆಸ್ಟ್ರೇಲಿಯದ ಆಟಗಾರರ ಒಪ್ಪಂದ ಪಟ್ಟಿ ಪ್ರಕಟ: ಖ್ವಾಜಾ, ವೋಗ್ಸ್‌ಗೆ ಸ್ಥಾನ
ಮೆಲ್ಬೋರ್ನ್, ಎ.1: ಹಲವು ಪ್ರಮುಖ ಆಟಗಾರರು ನಿವೃತ್ತಿಯಾದ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯ(ಸಿಎ) 2016-17ರ ಸಾಲಿನ ಆಟಗಾರರ ಒಪ್ಪಂದದ ಪಟ್ಟಿಯಲ್ಲಿ ಉಸ್ಮಾನ್ ಖ್ವಾಜಾ, ಆಡಮ್ ವೋಗ್ಸ್ ಹಾಗೂ ಜೋ ಬರ್ನ್ಸ್ ಅವರಿಗೆ ಸ್ಥಾನ ನೀಡಿದೆ.
ಕಳೆದ ಜುಲೈನಿಂದ ಆಟಗಾರರ ಪ್ರದರ್ಶನವನ್ನು ಆಧರಿಸಿ 20 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಶುಕ್ರವಾರ ಹೇಳಿದೆ.
ಪಾಕ್ ಸಂಜಾತ ಖ್ವಾಜಾ ಕಳೆದ ವರ್ಷ ಮಂಡಿನೋವಿನಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾದ ಬಳಿಕ ಟೆಸ್ಟ್‌ನಲ್ಲಿ ಸತತ ನಾಲ್ಕು ಶತಕ ಹಾಗೂ ಟ್ವೆಂಟಿ-20 ಪಂದ್ಯಗಳಲ್ಲಿ ಎರಡು ಶತಕವನ್ನು ಸಿಡಿಸಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದರು. ಕಳೆದ ವರ್ಷ ಒಪ್ಪಂದದ ಪಟ್ಟಿಯಿಂದ ಹೊರಗುಳಿದಿದ್ದ ನಥನ್ ಕೌಲ್ಟರ್-ನೈಲ್, ಜಾನ್ ಹೇಸ್ಟಿಂಗ್ಸ್, ಪೀಟರ್ ನೆವಿಲ್ ಹಾಗೂ ಪೀಟರ್ ಸಿಡ್ಲ್ ಈ ವರ್ಷ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದಾರೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಮಾಜಿ ನಾಯಕ ಮೈಕಲ್ ಕ್ಲಾರ್ಕ್, ಬ್ರಾಡ್ ಹಡಿನ್, ರಿಯಾನ್ ಹ್ಯಾರಿಸ್, ಮಿಚೆಲ್ ಜಾನ್ಸನ್, ಕ್ರಿಸ್ ರೋಜರ್ಸ್ ಹಾಗೂ ಶೇನ್ ವ್ಯಾಟ್ಸನ್ ನಿವೃತ್ತಿಯಾದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯದ ಆಟಗಾರರ ಗುತ್ತಿಗೆ ಪಟ್ಟಿಯಲ್ಲಿ ಹಲವು ಸ್ಥಾನ ತೆರವಾಗಿದ್ದವು.
ಗುತ್ತಿಗೆ ಪಡೆದ ಆಸ್ಟ್ರೇಲಿಯ ಆಟಗಾರರ ಪಟ್ಟಿ: ಜಾರ್ಜ್ ಬೈಲಿ, ಜೊ ಬರ್ನ್ಸ್, ನಥನ್ ಕೌಲ್ಟರ್ ನೈಲ್, ಪ್ಯಾಟ್ರಿಕ್ ಕಮ್ಮಿನ್ಸ್, ಜೇಮ್ಸ್ ಫಾಕ್ನರ್, ಆ್ಯರೊನ್ ಫಿಂಚ್, ಜಾನ್ ಹೇಸ್ಟಿಂಗ್ಸ್, ಜೋಶ್ ಹೇಝಲ್‌ವುಡ್, ಉಸ್ಮಾನ್ ಖ್ವಾಜಾ, ನಥನ್ ಲಿನ್, ಮಿಚೆಲ್ ಮಾರ್ಷ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಪೀಟರ್ ನೆವಿಲ್, ಜೇಮ್ಸ್ ಪ್ಯಾಟಿನ್ಸನ್, ಆಡಮ್ ವೋಗ್ಸ್, ಪೀಟರ್ ಸಿಡ್ಲ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್ ಹಾಗೂ ಡೇವಿಡ್ ವಾರ್ನರ್.