×
Ad

ವಿಶ್ವಕಪ್: ಭಾರತ-ವೆಸ್ಟ್‌ಇಂಡೀಸ್ ಸೆಮಿ ಫೈನಲ್ ಹೈಲೈಟ್ಸ್

Update: 2016-04-01 23:48 IST

ಮುಂಬೈ, ಎ.1: ಭಾರತ ಹಾಗೂ ವೆಸ್ಟ್‌ಇಂಡೀಸ್‌ನ ನಡುವೆ ಗುರುವಾರ ನಡೆದ ವಿಶ್ವಕಪ್‌ನ ಎರಡನೆ ಸೆಮಿಫೈನಲ್ ಪಂದ್ಯದ ಮುಖ್ಯಾಂಶಗಳು ಇಂತಿವೆ......

 *ಟ್ವೆಂಟಿ-20 ವಿಶ್ವಕಪ್‌ನ ನಾಕೌಟ್ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡ (196/3)ಗರಿಷ್ಠ ಗೆಲುವಿನ ಗುರಿಯನ್ನು (193)ಯಶಸ್ವಿಯಾಗಿ ಬೆನ್ನಟ್ಟಿದೆ.

* ವೆಸ್ಟ್‌ಇಂಡೀಸ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಎರಡನೆ ಬಾರಿ ಗರಿಷ್ಠ ಸ್ಕೋರನ್ನು ಯಶಸ್ವಿಯಾಗಿ ಬೆನ್ನಟ್ಟಿದೆ. 2015ರ ಜನವರಿ 11 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 237 ರನ್ ಗುರಿಯನ್ನು ಯಶಸ್ವಿಯಾಗಿ ತಲುಪಿತ್ತು.

* ವಾಂಖೆಡೆ ಸ್ಟೇಡಿಯಂನಲ್ಲಿ ಈ ವರ್ಷದ ಟ್ವೆಂಟಿ-20ಯಲ್ಲಿ ವೆಸ್ಟ್‌ಇಂಡೀಸ್ ತಂಡ ಎರಡನೆ ಬಾರಿ ಗರಿಷ್ಠ ಮೊತ್ತವನ್ನು ಚೇಸಿಂಗ್ ಮಾಡಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 183 ರನ್ ಗುರಿಯನ್ನು ಬೆನ್ನಟ್ಟಿತ್ತು. ಮಾ.18 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕದ ವಿರುದ್ಧ 230 ರನ್ ಗುರಿಯನ್ನು ಸುಲಭವಾಗಿ ತಲುಪಿ ದಾಖಲೆ ಬರೆದಿತ್ತು.

* ಲೆಂಡ್ಲ್ ಸಿಮನ್ಸ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಇನಿಂಗ್ಸ್(ಔಟಾಗದೆ 82, 51 ಎಸೆತ) ಆಡಿದರು. 2009ರಲ್ಲಿ ದಿ ಓವಲ್‌ನಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ 77 ರನ್ ಗಳಿಸಿದ್ದರು.

* ಸಿಮನ್ಸ್ ಟ್ವೆಂಟಿ-20ಯಲ್ಲಿ ಐದನೆ ಹಾಗೂ ಭಾರತದ ವಿರುದ್ಧ ಚೊಚ್ಚಲ ಅರ್ಧಶತಕ ಬಾರಿಸಿದರು.

*ಸಿಮನ್ಸ್ ಭಾರತ ವಿರುದ್ಧ ಟ್ವೆಂಟಿ-20ಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ವಿಂಡೀಸ್‌ನ ಎರಡನೆ ದಾಂಡಿಗ. ಕ್ರಿಸ್ ಗೇಲ್ ಮಾ.9, 2010ರಲ್ಲಿ 98 ರನ್ ಗಳಿಸಿದ್ದರು.

*ಸಿಮನ್ಸ್ ಟ್ವೆಂಟಿ-20 ಪಂದ್ಯದಲ್ಲಿ ಎರಡನೆ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು. ಮಾ.2, 2013ರಲ್ಲಿ ಝಿಂಬಾಬ್ವೆ ವಿರುದ್ಧ ಮೊದಲ ಪ್ರಶಸ್ತಿ ಪಡೆದಿದ್ದರು.

* ವೆಸ್ಟ್‌ಇಂಡೀಸ್ ಗಳಿಸಿದ 196 ರನ್‌ಗಳ ಪೈಕಿ 146 ರನ್ ಬೌಂಡರಿ, ಸಿಕ್ಸರ್‌ಗಳ ಮೂಲಕವೇ ಹರಿದು ಬಂದಿದೆ. ವಿಂಡೀಸ್ ಒಟ್ಟು 20 ಬೌಂಡರಿ, 11 ಸಿಕ್ಸರ್ ಸಿಡಿಸಿತ್ತು.

*ಭಾರತ ಒಟ್ಟು 11 ಸಿಕ್ಸರ್ ಬಿಟ್ಟುಕೊಟ್ಟಿದೆ. 2010ರಲ್ಲಿ ಆಸ್ಟ್ರೇಲಿಯ ವಿರುದ್ದ ಪಂದ್ಯದಲ್ಲಿ 16 ಸಿಕ್ಸರ್ ಬಿಟ್ಟುಕೊಟ್ಟಿತ್ತು.

*ಭಾರತ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಎರಡನೆ ಗರಿಷ್ಠ ಸ್ಕೋರ್(192) ದಾಖಲಿಸಿತು. 2007ರಲ್ಲಿ ಡರ್ಬನ್‌ನಲ್ಲಿ ಇಂಗ್ಲೆಂಡ್ ವಿರುದ್ದ 4 ವಿಕೆಟ್‌ಗೆ 218 ರನ್ ಗಳಿಸಿತ್ತು.

*ಜಾನ್ಸನ್ ಚಾರ್ಲ್ಸ್(52 ರನ್) ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಎರಡನೆ ಅರ್ಧಶತಕ ಬಾರಿಸಿದರು. ಸೆ.27, 2012ರಲ್ಲಿ ಇಂಗ್ಲೆಂಡ್ ವಿರುದ್ಧ ಜೀವನಶ್ರೇಷ್ಠ 84 ರನ್ ಗಳಿಸಿದ್ದರು.

*ಚಾರ್ಲ್ಸ್-ಸಿಮನ್ಸ್ ಜೋಡಿ 3ನೆ ವಿಕೆಟ್‌ಗೆ 97 ರನ್ ಜೊತೆಯಾಟ ನಡೆಸಿತು. ಇದು ಭಾರತ ವಿರುದ್ದ ಟಿ-20ಯಲ್ಲಿ ವೆಸ್ಟ್‌ಇಂಡೀಸ್‌ನ ಗರಿಷ್ಠ ಜೊತೆಯಾಟವಾಗಿದೆ.

*ವಿರಾಟ್ ಕೊಹ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 16ನೆ ಬಾರಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಈ ಮೂಲಕ ತಲಾ 15 ಬಾರಿ 50 ಪ್ಲಸ್ ಸ್ಕೋರ್ ದಾಖಲಿಸಿದ್ದ ಕ್ರಿಸ್ ಗೇಲ್ ಹಾಗೂ ಬ್ರೆಂಡನ್ ಮೆಕಲಮ್ ದಾಖಲೆಯನ್ನು ಮುರಿದರು. ಕೊಹ್ಲಿ ಶತಕ ದಾಖಲಿಸದೆಯೇ ಟ್ವೆಂಟಿ-20ಯಲ್ಲಿ ಗರಿಷ್ಠ ರನ್ ಗಳಿಸಿದ ಸಾಧನೆಯನ್ನು ಗೌತಮ್ ಗಂಭೀರ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

*ಕೊಹ್ಲಿ ವಿಶ್ವಕಪ್‌ನ 5 ಇನಿಂಗ್ಸ್‌ಗಳಲ್ಲಿ ಒಟ್ಟು 273 ರನ್ ಗಳಿಸಿದ್ದಾರೆ. ಇದು ವಿಶ್ವಕಪ್‌ನಲ್ಲಿ ಕೊಹ್ಲಿ ಎರಡನೆ ಗರಿಷ್ಠ ಸ್ಕೋರ್. ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡಿರುವ 16 ಇನಿಂಗ್ಸ್‌ಗಳಲ್ಲಿ ಕೊಹ್ಲಿ ಒಟ್ಟು 777 ರನ್ ಗಳಿಸಿದ್ದಾರೆ. ಇದರಲ್ಲಿ 9 ಅರ್ಧಶತಕಗಳಿವೆ.

 *ಕೊಹ್ಲಿ ವಿಶ್ವಕಪ್‌ನ ನಾಕೌಟ್ ಹಂತದಲ್ಲಿ 3 ಇನಿಂಗ್ಸ್‌ಗಳಲ್ಲಿ 3 ಅರ್ಧಶತಕ ಬಾರಿಸಿದ್ದಾರೆ. ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ದಾಂಡಿಗ ಕೊಹ್ಲಿ. 2014ರಲ್ಲಿ ಢಾಕಾದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಸೆಮಿ ಫೈನಲ್‌ನಲ್ಲಿ ಔಟಾಗದೆ 72, 2014ರಲ್ಲಿ ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ 77 ಹಾಗೂ 2016ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಸೆಮಿ ಫೈನಲ್‌ನಲ್ಲಿ ಔಟಾಗದೆ 89 ರನ್ ಗಳಿಸಿದ್ದಾರೆ.

*ಕೊಹ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಟ್ವೆಂಟಿ-20ಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಭಾರತದ ಮೊದಲ ದಾಂಡಿಗ ಎನಿಸಿಕೊಂಡರು. ಈ ಮೂಲಕ ಯುವರಾಜ್ ದಾಖಲೆ ಮುರಿದರು. 2009ರಲ್ಲಿ ಯುವರಾಜ್ ಸಿಂಗ್ ಲಾರ್ಡ್ಸ್‌ನಲ್ಲಿ ವಿಂಡೀಸ್ ವಿರುದ್ಧ 67 ರನ್ ಗಳಿಸಿದ್ದರು.

* ಭಾರತ ಮೊದಲ ಬಾರಿ ಟ್ವೆಂಟಿ-20 ಪಂದ್ಯದಲ್ಲಿ ಮೊದಲ ಮೂರು ವಿಕೆಟ್‌ನಲ್ಲಿ ಐವತ್ತಕ್ಕೂ ಅಧಿಕ ರನ್ ಜೊತೆಯಾಟ ನಡೆಸಿದೆ. ಮೊದಲ ವಿಕೆಟ್‌ನಲ್ಲಿ ರೋಹಿತ್-ರಹಾನೆ 62, 2ನೆ ವಿಕೆಟ್‌ನಲ್ಲಿ ರಹಾನೆ ಹಾಗೂ ಕೊಹ್ಲಿ 66 ಹಾಗೂ ಕೊಹ್ಲಿ-ಧೋನಿ 3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 64 ರನ್ ಸೇರಿಸಿದ್ದರು.

* ವೆಸ್ಟ್‌ಇಂಡೀಸ್ ಭಾರತ ವಿರುದ್ದ ಆಡಿರುವ ಐದು ಟ್ವೆಂಟಿ-20 ಪಂದ್ಯಗಳ ಪೈಕಿ ಮೂರರಲ್ಲಿ ಜಯ, ಎರಡರಲ್ಲಿ ಸೋಲು ಕಂಡಿದೆ.

* 2ನೆ ಸೆಮಿಫೈನಲ್‌ನಲ್ಲಿ ಭಾರತ-ವಿಂಡೀಸ್ 39.4 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ಗಳ ನಷ್ಟದಲ್ಲಿ ಒಟ್ಟು 388 ರನ್ ಗಳಿಸಿವೆ. ಇದು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಉಭಯ ತಂಡಗಳಿಂದ ದಾಖಲಾದ ಎರಡನೆ ಗರಿಷ್ಠ ಸ್ಕೋರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News