×
Ad

ಟ್ವೆಂಟಿ-20ವಿಶ್ವಕಪ್: ಉಪ ಖಂಡದ ಸ್ಪಿನ್ನರ್‌ಗಳಿಗಿಂತ ವಿದೇಶಿಯರೇ ಉತ್ತಮ

Update: 2016-04-02 10:18 IST

 ಹೊಸದಿಲ್ಲಿ, ಎ.2: ಪ್ರಸ್ತುತ ನಡೆಯುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಉಪಖಂಡದ ತಂಡಗಳಾದ ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳ ಸ್ಪಿನ್ನರ್‌ಗಳಿಗಿಂತ ವಿದೇಶಿ ಸ್ಪಿನ್ನರ್‌ಗಳೇ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ನಾಗ್ಪುರದಲ್ಲಿ ಮಾ.15 ರಂದು ನಡೆದ ಟೂರ್ನಿಯ ಮೊದಲ ಸೂಪರ್-10 ಪಂದ್ಯದಲ್ಲಿ ನ್ಯೂಝಿಲೆಂಡ್‌ನ ತ್ರಿವಳಿ ಸ್ಪಿನ್ನರ್‌ಗಳಾದ ಮಿಚೆಲ್ ಸ್ಯಾಂಟ್ನರ್, ಐಶ್ ಸೋಧಿ ಹಾಗೂ ನಥನ್ ಮೆಕಲಮ್ ಬೀಸಿದ್ದ ಸ್ಪಿನ್ ಬಲೆಗೆ ಬಿದ್ದಿದ್ದ ಆತಿಥೇಯ ಭಾರತ 47 ರನ್‌ಗಳ ಸೋಲು ಅನುಭವಿಸಿತ್ತು. ಆ ಪಂದ್ಯದಲ್ಲಿ ಸ್ಯಾಂಟ್ನರ್ 11 ರನ್‌ಗೆ 4 ವಿಕೆಟ್ ಕಬಳಿಸಿದರೆ, ಸೋಧಿ ಹಾಗೂ ನಥನ್ ಮೆಕಲಮ್ ಐದು ವಿಕೆಟ್‌ಗಳನ್ನು ಹಂಚಿಕೊಂಡಿದ್ದರು.
ಭಾರತ ವಿರುದ್ದ ಪಂದ್ಯದ ಬಳಿಕ ಕಿವೀಸ್‌ನ ಈ ತ್ರಿವಳಿ ಸ್ಪಿನ್ನರ್‌ಗಳು ಪಾಕ್ ವಿರುದ್ಧ 3 ಹಾಗೂ ಬಾಂಗ್ಲಾದೇಶದ ವಿರುದ್ಧ ಒಟ್ಟು ಐದು ವಿಕೆಟ್‌ಗಳನ್ನು ಉಡಾಯಿಸಿದ್ದರು.

ಆಸ್ಟ್ರೇಲಿಯದ ಲೆಗ್ ಸ್ಪಿನ್ನರ್ ಆಡಮ್ ಝಾಂಪ ಬಾಂಗ್ಲಾದ ವಿರುದ್ಧ 3 ವಿಕೆಟ್, ಪಾಕ್ ವಿರುದ್ಧ 2 ವಿಕೆಟ್ ಪಡೆದಿದ್ದರು. ಅದೇ ರೀತಿ ವೆಸ್ಟ್‌ಇಂಡೀಸ್ ಸ್ಪಿನ್ನರ್ ಸ್ಯಾಮುಯೆಲ್ ಬದ್ರಿ(ಶ್ರೀಲಂಕಾ ವಿರುದ್ಧ 3/12), ದಕ್ಷಿಣ ಆಫ್ರಿಕದ ಎಡಗೈ ಸ್ಪಿನ್ನರ್ ಆ್ಯರೊನ್ ಫಾಂಗಿಸೊ(ಲಂಕಾ ವಿರುದ್ಧ ಸತತ 2 ವಿಕೆಟ್) ಗಮನಾರ್ಹ ಪ್ರದರ್ಶನ ನೀಡಿದ್ದರು.

ಆದರೆ, ಸ್ಪಿನ್ ಸ್ನೇಹಿ ಭಾರತದ ಪಿಚ್‌ಗಳಲ್ಲಿ ಉಪ ಖಂಡದ ಸ್ಪಿನ್ನರ್‌ಗಳು ಭಾರೀ ವೈಫಲ್ಯ ಕಂಡಿದ್ದಾರೆ. ಭಾರತದ ಪ್ರಮುಖ ಸ್ಪಿನ್ನರ್ ಆರ್.ಅಶ್ವಿನ್ 4 ಸೂಪರ್-10 ಪಂದ್ಯಗಳಲ್ಲಿ ಕೇವಲ 4 ವಿಕೆಟ್ ಪಡೆದಿದ್ದರು. ಶ್ರೀಲಂಕಾದ ರಂಗನಾ ಹೆರಾತ್ ಹಾಗೂ ಲೆಗ್ ಸ್ಪಿನ್ನರ್ ಜೆಫ್ರಿ ವಾಂಡರ್‌ಸೇ ತಲಾ 3 ವಿಕೆಟ್‌ಗಳನ್ನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News