ಧೋನಿಯ ‘ಕೂಲ್ ಕ್ಯಾಪ್ಟನ್’ ಮುಖವಾಡ ಕಳಚಿ ಬೀಳುತ್ತಿದೆಯೇ?
ಮುಂಬೈ, ಎ.2: ಇನ್ನು ಮೂರೇ ತಿಂಗಳಲ್ಲಿ 35ನೆ ವಸಂತಕ್ಕೆ ಕಾಲಿಡಲಿರುವ ಭಾರತದ ‘ಕ್ಯಾಪ್ಟನ್ ಕೂಲ್’ ಖ್ಯಾತಿಯ ನಾಯಕ ಎಂಎಸ್ ಧೋನಿ ಇತ್ತೀಚೆಗಿನ ದಿನಗಳಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಅವರ ಈ ನಡವಳಿಕೆಯಿಂದ ಅವರ ಕ್ಯಾಪ್ಟನ್ ಕೂಲ್ ಮುಖವಾಡ ಕಳಚಿ ಬೀಳುತ್ತಿದೆಯೇ ಎಂಬ ಅನುಮಾನ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ.
ವೆಸ್ಟ್‌ಇಂಡೀಸ್ ವಿರುದ್ಧ ಗುರುವಾರ ನಡೆದ ವಿಶ್ವಕಪ್‌ನ ಎರಡನೆ ಸೆಮಿ ಫೈನಲ್ ಪಂದ್ಯದಲ್ಲಿ ತಂಡ ಗರಿಷ್ಠ ಮೊತ್ತ ಗಳಿಸಿದ ಹೊರತಾಗಿಯೂ ಬೌಲರ್‌ಗಳ ಎರಡು ನೋ ಬಾಲ್‌ನಿಂದಾಗಿ ಭಾರತ ಪಂದ್ಯವನ್ನು ಸೋತು ಟೂರ್ನಿಯಿಂದ ಹೊರ ನಡೆದಿತ್ತು. ಪಂದ್ಯ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ವಿದೇಶಿ ಪತ್ರಕರ್ತನೊಬ್ಬ ಸೋಲಿನ ಹೊಣೆ ಹೊತ್ತು ನಿವೃತ್ತಿಯಾಗುತ್ತೀರಾ? ಎಂದು ಧೋನಿ ಅವರಲ್ಲಿ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡಿದ್ದ ಧೋನಿ ಪ್ರಶ್ನೆ ಕೇಳಿದ ಆಸ್ಟ್ರೇಲಿಯದ ಪತ್ರಕರ್ತನನ್ನು ತನ್ನ ಬಳಿ ಕುಳ್ಳಿರಿಸಿ ಮರು ಪ್ರಶ್ನೆ ಕೇಳಿದ್ದು ಅವರ ಪ್ರಜ್ಞಾವಂತ ವರ್ತನೆಯಾಗಿರಲಿಲ್ಲ.
ಪತ್ರಕರ್ತನ ನಿವೃತ್ತಿಯ ಪ್ರಶ್ನೆಗೆ ಧೋನಿಗೆ ನೇರ ಉತ್ತರ ನೀಡಬಹುದಿತ್ತು. ಎಲ್ಲರಿಗೆ ಗೊತ್ತಿರುವ ಹಾಗೆ ಧೋನಿ 2017ರ ಚಾಂಪಿಯನ್ಸ್ ಟ್ರೋಫಿಯ ತನಕ ಸೀಮಿತ ಓವರ್ ಕ್ರಿಕೆಟ್‌ನಿಂದ ನಿವೃತ್ತಿಯಾಗಲಾರರು. ಐಪಿಎಲ್‌ನ ಪುಣೆ ರೈಸಿಂಗ್ ಜೈಂಟ್ಸ್ ತಂಡದೊಂದಿಗೆ ಅವರು ಇನ್ನೆರಡು ವರ್ಷ ಒಪ್ಪಂದ ಮಾಡಿಕೊಂಡಿದ್ದಾರೆ. ಅವರ ಫಿಟ್‌ನೆಸ್ ಹಾಗೂ ತಂಡದ ಅಗತ್ಯವನ್ನು ಆಧರಿಸಿ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ತೀರ್ಮಾನಿಸಲೂ ಬಹುದು.
ಧೋನಿ ಬೆಂಗಳೂರಿನಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್-10 ಪಂದ್ಯವನ್ನು ಕೇವಲ 1 ರನ್‌ನಿಂದ ಗೆಲುವು ಸಾಧಿಸಿದ ನಂತರ ಭಾರತದ ಪತ್ರಕರ್ತನೊಬ್ಬ ಕೇಳಿದ್ದ ಪ್ರಶ್ನೆಗೆ ಕೆರಳಿ ಕೆಂಡವಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನೆಟ್ ರನ್‌ರೇಟ್ ಅಗತ್ಯವಿರುವ ಈ ಹೊತ್ತಿನಲ್ಲಿ ಭಾರತ ಕಡಿಮೆ ಅಂತರದಲ್ಲಿ ಗೆದ್ದಿರುವುದು ನಿಮಗೆ ತೃಪ್ತಿ ತಂದಿದೆಯೇ ಎಂದು ಧೋನಿಗೆ ಪತ್ರಕರ್ತನೊಬ್ಬ ಪ್ರಶ್ನೆ ಕೇಳಿದ್ದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಧೋನಿ, ನಿಮಗೆ ಭಾರತ ಜಯ ಸಾಧಿಸಿರುವುದು ಇಷ್ಟವಾಗಿಲ್ಲವೇ? ಎಂದು ಕೇಳಿ ಪತ್ರಕರ್ತನ ಬಾಯಿ ಮುಚ್ಚಿಸಿದ್ದರು.