×
Ad

ಇಂದು ಕೋಲ್ಕತಾದಲ್ಲಿ ಟ್ವೆಂಟಿ-20 ವಿಶ್ವಕಪ್ ಫೈನಲ್

Update: 2016-04-02 23:55 IST

ಎರಡನೆ ಪ್ರಶಸ್ತಿಗಾಗಿ ಇಂಗ್ಲೆಂಡ್-ವೆಸ್ಟ್‌ಇಂಡೀಸ್ ಹೋರಾಟ

ಕೋಲ್ಕತಾ, ಎ.2: ಐತಿಹಾಸಿಕ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ರವಿವಾರ ರಾತ್ರಿ ಆರನೆ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದ್ದು, 2010ರ ಚಾಂಪಿಯನ್ ವೆಸ್ಟ್‌ಇಂಡೀಸ್ ಹಾಗೂ 2012ರ ಚಾಂಪಿಯನ್ ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ಉಭಯ ತಂಡಗಳು ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಎರಡನೆ ಬಾರಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಲು ಎದುರು ನೋಡುತ್ತಿವೆ. ಟ್ವೆಂಟಿ-20 ವಿಶ್ವಕಪ್‌ನಲ್ಲಿ ಈ ತನಕ ಒಂದು ತಂಡ ಎರಡು ಬಾರಿ ಪ್ರಶಸ್ತಿ ಜಯಿಸಿಲ್ಲ.

ಗೇಲ್ ಅಬ್ಬರದ ನಂತರ ಚೇತರಿಸಿಕೊಂಡ ಇಂಗ್ಲೆಂಡ್: ಸೂಪರ್-10 ಹಂತದ ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಅಬ್ಬರಕ್ಕೆ ತತ್ತರಿಸಿ ಸೋಲನುಭವಿಸಿದ್ದ ಇಂಗ್ಲೆಂಡ್ ಆ ನಂತರ ನಡೆದ ಎಲ್ಲ ಪಂದ್ಯಗಳನ್ನು ಜಯಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ವಿಂಡೀಸ್ ವಿರುದ್ಧ ಸೋತ 2 ದಿನಗಳ ಬಳಿಕ ದಕ್ಷಿಣ ಆಫ್ರಿಕ ವಿರುದ್ಧ ಮುಂಬೈನಲ್ಲಿ ಆಡಿದ್ದ ಆಂಗ್ಲರು 230 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ವಿಶ್ವದ ಗಮನ ಸೆಳೆದಿದ್ದರು.

ಮುಂಬೈನಿಂದ ಹೊಸದಿಲ್ಲಿಗೆ ತೆರಳಿದ ಇಂಗ್ಲೆಂಡ್ ಅಲ್ಲಿನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಜಯಿಸಿತ್ತು. ಅಜೇಯ ಗೆಲುವಿನಿಂದ ಬೀಗುತ್ತಿದ್ದ ನ್ಯೂಝಿಲೆಂಡ್ ವಿರುದ್ಧ ಸೆಮಿ ಫೈನಲ್‌ನಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿತ್ತು. ಟ್ವೆಂಟಿ-20 ವಿಶ್ವಕಪ್ ಆರಂಭಕ್ಕೆ ಮೊದಲು ದಕ್ಷಿಣ ಆಫ್ರಿಕ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ಅಲ್ಲಿ ಟ್ವೆಂಟಿ-20 ಸರಣಿಯನ್ನು 2-0 ಹಾಗೂ ಏಕದಿನ ಸರಣಿಯನ್ನು 2-3 ಅಂತರದಿಂದ ಸೋತಿತ್ತು. ಆದರೆ, ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಸೋಲಿಗೆ ಸೇಡು ತೀರಿಸಿಕೊಂಡಿತ್ತು. ಆಫ್ರಿಕ ವಿರುದ್ಧ ಹೈ- ಸ್ಕೋರ್ ಪಂದ್ಯದಲ್ಲಿ 44 ಎಸೆತಗಳಲ್ಲಿ 83 ರನ್ ಗಳಿಸಿದ್ದ ಜೋ ರೂಟ್ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದರು. ಟೂರ್ನಿಯಲ್ಲಿ ಒಟ್ಟು 195 ರನ್ ಗಳಿಸಿರುವ ರೂಟ್ ವಿರಾಟ್ ಕೊಹ್ಲಿ ಬಳಿಕ ಟೂರ್ನಿಯಲ್ಲಿ ಎರಡನೆ ಗರಿಷ್ಠ ಸ್ಕೋರರ್ ಆಗಿದ್ದಾರೆ.

ವಿಂಡೀಸ್ ಅಪೂರ್ವ ಗೆಲುವಿನ ಯಾನ : ಕ್ರಿಕೆಟ್ ಮಂಡಳಿಯೊಂದಿಗಿನ ವೇತನ ವಿವಾದದಿಂದಾಗಿ ಒಂದು ಹಂತದಲ್ಲಿ ಟೂರ್ನಿಯಿಂದ ಹೊರಗುಳಿಯುವ ಸ್ಥಿತಿಯಲ್ಲಿದ್ದ ವಿಂಡೀಸ್ ಟ್ವೆಂಟಿ-20 ವಿಶ್ವಕಪ್ ಟೂರ್ನಿ ಆರಂಭವಾಗುವ ತನಕ ಒಂದೂ ಟ್ವೆಂಟಿ-20 ಪಂದ್ಯವನ್ನು ಆಡಿರಲಿಲ್ಲ. ತಂಡದಲ್ಲಿ ಸುನೀಲ್ ನರೇನ್, ಕೀರನ್ ಪೊಲಾರ್ಡ್, ಡರೆನ್ ಬ್ರಾವೊರಂತಹ ಆಟಗಾರರ ಅನುಪಸ್ಥಿತಿಯೂ ಇತ್ತು. ಈ ಎಲ್ಲ ಕೊರತೆಯ ನಡುವೆಯೂ ಇಂಗ್ಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕ ಹಾಗೂ ಭಾರತವನ್ನು ಮಣಿಸಿದ್ದ ವಿಂಡೀಸ್ ಫೈನಲ್‌ಗೆ ಪ್ರವೇಶಿಸಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿತು. ವೆಸ್ಟ್‌ಇಂಡೀಸ್‌ಗೆ ಅಗತ್ಯವಿದ್ದಾಗ ಹೀರೋ ಒಬ್ಬ ಉದಯಿಸುತ್ತಾನೆ. ಆ್ಯಂಡ್ರೆ ಫ್ಲೆಚರ್ ಬದಲಿಗೆ ಸೆಮಿ ಫೈನಲ್‌ನಲ್ಲಿ ಆಡಿದ್ದ ಲೆಂಡ್ಲ್ ಸಿಮನ್ಸ್ ಭಾರತದ ವಿರುದ್ಧ ಏಕಾಂಗಿ ಹೋರಾಟ ನೀಡಿ ತಂಡವನ್ನು ಫೈನಲ್‌ಗೆ ತಲುಪಿಸಿದ್ದರು.

ಇಂಗ್ಲೆಂಡ್ ವಿರುದ್ಧ ವಿಂಡೀಸ್ ಉತ್ತಮ ದಾಖಲೆ: ಇಂಗ್ಲೆಂಡ್ ವಿಶ್ವಕಪ್ ಟೂರ್ನಿಯಲ್ಲಿ ಈ ತನಕ ವೆಸ್ಟ್‌ಇಂಡೀಸ್‌ನ್ನು ಸೋಲಿಸಿಲ್ಲ. ಉಭಯ ತಂಡಗಳು ಇದೇ ಟೂರ್ನಿಯಲ್ಲಿ ಮಾ.16 ರಂದು ಮುಂಬೈನಲ್ಲಿ ಸೂಪರ್-10 ಪಂದ್ಯದಲ್ಲಿ ಸೆಣಸಾಡಿದ್ದವು. ಆ ಪಂದ್ಯದಲ್ಲಿ ಔಟಾಗದೆ ಶತಕ ಸಿಡಿಸಿದ್ದ ಗೇಲ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ವಿಂಡೀಸ್ ವಿರುದ್ಧ 4-9 ಗೆಲುವು-ಸೋಲಿನ ದಾಖಲೆ ಹೊಂದಿರುವ ಇಂಗ್ಲೆಂಡ್ ಈಡನ್‌ಗಾರ್ಡನ್ಸ್‌ನಲ್ಲಿ 29 ವರ್ಷಗಳ ನಂತರ ವಿಶ್ವಕಪ್ ಫೈನಲ್ ಪಂದ್ಯವನ್ನು ಆಡಲು ಸಜ್ಜಾಗುತ್ತಿದೆ. 1987ರಲ್ಲಿ ಮೈಕ್ ಗ್ಯಾಟ್ಲಿಂಗ್ ನಾಯಕತ್ವದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯದ ಫೈನಲ್ ಪಂದ್ಯವನ್ನು ಆಡಿತ್ತು. 50 ಓವರ್‌ಗಳ ಆ ಪಂದ್ಯದಲ್ಲಿ ಆಸ್ಟ್ರೇಲಿಯ 7 ರನ್‌ಗಳ ಅಂತರದಿಂದ ರೋಚಕ ಗೆಲುವು ಸಾಧಿಸಿತ್ತು.

ವಿಂಡೀಸ್ ಬ್ಯಾಟಿಂಗ್‌ಗೆ ಗೇಲ್ ನೇತೃತ್ವ: ವಿಶ್ವಕಪ್ ಟೂರ್ನಿಯಲ್ಲಿ ವಿಂಡೀಸ್ ತಂಡದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬಿಗ್ ಹಿಟ್ಟರ್‌ಗಳಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೂರ್ನಿಯ ಮೊದಲ ಪಂದ್ಯದಲ್ಲಿ ಔಟಾಗದೆ ಶತಕ ಬಾರಿಸಿದ್ದ ಗೇಲ್ ಮತ್ತೊಮ್ಮೆ ಅಬ್ಬರಿಸಲು ಸಿದ್ಧವಾಗಿದ್ದಾರೆ. ಗೇಲ್‌ಗೆ ಸಾಥ್ ನೀಡಲು ಭಾರತ ವಿರುದ್ಧ ಅರ್ಧಶತಕ ಗಳಿಸಿರುವ ಚಾರ್ಲ್ಸ್ ಹಾಗೂ ಸಿಮನ್ಸ್ ಅವರಿದ್ದಾರೆ. ಆ್ಯಂಡ್ರೆ ರಸ್ಸಲ್, ಡ್ವೇಯ್ನೆ ಬ್ರಾವೊ ಹಾಗೂ ನಾಯಕ ಡೆರನ್ ಸಮ್ಮಿ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಆಧರಿಸಬಲ್ಲರು. ಈಡನ್‌ಗಾರ್ಡನ್ಸ್ ಪಿಚ್‌ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಸಿರು ಹುಲ್ಲು ಇದೆ. ಇದು ಇಂಗ್ಲೆಂಡ್ ಬೌಲರ್‌ಗಳಾದ ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡನ್, ಲಿಯಾಮ್ ಪ್ಲಂಕೆಟ್ ಹಾಗೂ ಬೆನ್ ಸ್ಟೋಕ್ಸ್‌ಗೆ ನೆರವಾಗಬಹುದು. ಎಡಗೈ ವೇಗಿ ವಿಲ್ಲಿ ಟೂರ್ನಿಯಲ್ಲಿ ಒಟ್ಟು 7 ವಿಕೆಟ್ ಉರುಳಿಸಿದ್ದಾರೆ. ಸ್ಪಿನ್ ವಿಭಾಗದಲ್ಲಿ ವೆಸ್ಟ್‌ಇಂಡೀಸ್‌ನ ಸ್ಯಾಮುಯೆಲ್ ಬದ್ರಿ ಹಾಗೂ ಸುಲೇಮಾನ್ ಬೆನ್ ಇಂಗ್ಲೆಂಡ್‌ನ ಮೊಯಿನ್ ಅಲಿ ಹಾಗೂ ಆದಿಲ್ ರಶೀದ್‌ಗಿಂತ ಚೆನ್ನಾಗಿ ಬೌಲಿಂಗ್ ಮಾಡಬಲ್ಲರು.

2016ರಲ್ಲಿ ಟ್ವೆಂಟಿ-20 ದಾಖಲೆ

ಇಂಗ್ಲೆಂಡ್: ಪಂದ್ಯ 7, ಗೆಲುವು 4, ಸೋಲು 3

ವೆಸ್ಟ್‌ಇಂಡೀಸ್: ಪಂದ್ಯ 5, ಜಯ 4, ಸೋಲು 1

ಸಂಭಾವ್ಯ ತಂಡ: ಇಂಗ್ಲೆಂಡ್: ಜೇಸನ್ ರಾಯ್, ಅಲೆಕ್ಸ್ ಹೇಲ್ಸ್, ಜೋರೂಟ್, ಇಯಾನ್ ಮಾರ್ಗನ್, ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಆದಿಲ್ ರಶೀದ್, ಲಿಯಾಮ್ ಪ್ಲಂಕೆಟ್, ಕ್ರಿಸ್ ಜೋರ್ಡನ್ ಡೇವಿಡ್ ವಿಲ್ಲಿ.

ವೆಸ್ಟ್‌ಇಂಡೀಸ್: ಕ್ರಿಸ್ ಗೇಲ್, ಜಾನ್ಸನ್ ಚಾರ್ಲ್ಸ್, ಮರ್ಲಾನ್ ಸ್ಯಾಮುಯೆಲ್ಸ್, ಲೆಂಡ್ಲ್ ಸಿಮನ್ಸ್, ದಿನೇಶ್ ರಾಮ್ದೀನ್, ಡ್ವೇಯ್ನ್ ಬ್ರಾವೊ, ಆ್ಯಂಡ್ರೆ ರಸ್ಸಲ್, ಡರೆನ್ ಸಮ್ಮಿ(ನಾಯಕ), ಕಾರ್ಲಸ್ ಬ್ರಾತ್‌ವೇಟ್, ಸ್ಯಾಮುಯೆಲ್ ಬದ್ರಿ, ಸುಲೆಮಾನ್ ಬೆನ್.

...........

ಪಂದ್ಯದ ಸಮಯ: ರಾತ್ರಿ 7:00

.........

ಫೈನಲ್ ಹಾದಿ

ವೆಸ್ಟ್‌ಇಂಡೀಸ್

ಇಂಗ್ಲೆಂಡ್ ವಿರುದ್ಧ 6 ವಿಕೆಟ್‌ಗಳ ಜಯ

ಶ್ರೀಲಂಕಾದ ವಿರುದ್ಧ 7 ವಿಕೆಟ್‌ಗಳ ಜಯ

ದಕ್ಷಿಣ ಆಫ್ರಿಕದ ವಿರುದ್ಧ 3 ವಿಕೆಟ್‌ಗಳ ಜಯ

ಅಫ್ಘಾನಿಸ್ತಾನದ ವಿರುದ್ದ 6 ರನ್ ಸೋಲು

ಭಾರತ ವಿರುದ್ಧ 7 ವಿಕೆಟ್‌ಗಳ ಜಯ

ಇಂಗ್ಲೆಂಡ್

ವೆಸ್ಟ್‌ಇಂಡೀಸ್ ವಿರುದ್ಧ 6 ವಿಕೆಟ್ ಸೋಲು

ದಕ್ಷಿಣ ಆಫ್ರಿಕದ ವಿರುದ್ಧ 2 ವಿಕೆಟ್ ಗೆಲುವು

ಅಫ್ಘಾನಿಸ್ತಾನದ ವಿರುದ್ಧ 15 ರನ್ ಜಯ

ಶ್ರೀಲಂಕಾದ ವಿರುದ್ಧ 10 ರನ್ ಜಯ

ನ್ಯೂಝಿಲೆಂಡ್ ವಿರುದ್ಧ 7 ವಿಕೆಟ್‌ಗಳ ಜಯ

........

ಅಂಕಿ-ಅಂಶ

4: ಡ್ವೇಯ್ನ ಬ್ರಾವೊಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರೈಸಲು 4 ವಿಕೆಟ್ ಅಗತ್ಯವಿದೆ. ಬ್ರಾವೊ 50 ವಿಕೆಟ್ ಹಾಗೂ ಸಾವಿರ ರನ್ ಗಳಿಸಿದ ಇಬ್ಬರು ಆಟಗಾರರ ಕ್ಲಬ್‌ಗೆ ಸೇರಲು ಸಜ್ಜಾಗಿದ್ದಾರೆ. ಶಾಹಿದ್ ಅಫ್ರಿದಿ ಹಾಗೂ ಶಾಕಿಬ್ ಅಲ್ ಹಸನ್ ಈ ಸಾಧನೆ ಮಾಡಿದ್ದಾರೆ.

9: ವೆಸ್ಟ್‌ಇಂಡೀಸ್ ತಂಡ ಇಂಗ್ಲೆಂಡ್ ವಿರುದ್ಧ ಆಡಿರುವ 12 ಟ್ವೆಂಟಿ-20 ಪಂದ್ಯಗಳ ಪೈಕಿ 9ರಲ್ಲಿ ಜಯ ಸಾಧಿಸಿದೆ.

2: ಕ್ರಿಸ್ ಗೇಲ್‌ಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಪೂರೈಸಲು ಇನ್ನು 2 ಸಿಕ್ಸರ್‌ಗಳ ಅಗತ್ಯವಿದೆ. 13: 2007ರ ಬಳಿಕ ಇಂಗ್ಲೆಂಡ್-ವಿಂಡೀಸ್ 13 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಡೆರನ್ ಸಮ್ಮಿ ಎಲ್ಲ ಪಂದ್ಯಗಳಲ್ಲಿ ಆಡಿದ್ದಾರೆ. 36: ವೆಸ್ಟ್‌ಇಂಡೀಸ್ ಪ್ರಸ್ತುತ ಟೂರ್ನಿಯಲ್ಲಿ 36 ಸಿಕ್ಸರ್ ಸಿಡಿಸಿದ ಮೊದಲ ತಂಡ. ಇಂಗ್ಲೆಂಡ್ 30 ಸಿಕ್ಸರ್ ಸಿಡಿಸಿ ಎರಡನೆ ಸ್ಥಾನದಲ್ಲಿದೆ.

       ಟ್ವೆಂಟಿ-20 ಚಾಂಪಿಯನ್ನರು     ರನ್ನರ್ ಅಪ್

       2007: ಭಾರತ                ಪಾಕಿಸ್ತಾನ

       2009: ಪಾಕಿಸ್ತಾನ           ಶ್ರೀಲಂಕಾ

       2010: ಇಂಗ್ಲೆಂಡ್‌            ಆಸ್ಟ್ರೇಲಿಯ

         2012:      ವೆಸ್ಟ್‌ಇಂಡೀಸ್           ಶ್ರೀಲಂಕಾ

       2014: ಶ್ರೀಲಂಕಾ              ಭಾರತ

       2016:     ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News