×
Ad

ಇಂದು ಮಹಿಳೆಯರ ಟ್ವೆಂಟಿ-20 ವಿಶ್ವಕಪ್ ಫೈನಲ್

Update: 2016-04-02 23:57 IST

ಚಾಂಪಿಯನ್ ಆಸ್ಟ್ರೇಲಿಯಕ್ಕೆ ವಿಂಡೀಸ್ ಎದುರಾಳಿ

ಕೋಲ್ಕತಾ, ಎ.2: ಐಸಿಸಿ ಮಹಿಳೆಯರ ಟ್ವೆಂಟಿ-20 ವಿಶ್ವಕಪ್ ಫೈನಲ್ ಪಂದ್ಯ ರವಿವಾರ ಇಲ್ಲಿ ನಡೆಯಲಿದ್ದು, ಸ್ಫೂರ್ತಿಯುತ ವೆಸ್ಟ್‌ಇಂಡೀಸ್ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯವನ್ನು ಎದುರಿಸಲಿದೆ.

ಮೆಗ್ ಲ್ಯಾನಿಂಗ್ ನಾಯಕತ್ವದ ಆಸ್ಟ್ರೇಲಿಯದ ಮಹಿಳಾ ತಂಡ ಸೆಮಿ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್‌ನ್ನು 5 ರನ್ ಅಂತರದಿಂದ ಮಣಿಸಿತ್ತು. ಇಂಗ್ಲೆಂಡ್ ವಿರುದ್ಧ 55 ರನ್ ಗಳಿಸಿರುವ ಲ್ಯಾನಿಂಗ್ ಕೂಟದಲ್ಲಿ ಒಟ್ಟು 149 ರನ್ ಗಳಿಸಿದ್ದಾರೆ.

ಸ್ಪಿನ್ ಸ್ನೇಹಿ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಆಸೀಸ್‌ನ ಕಿರ್ಸ್ಟನ್ ಬೀಮ್ಸ್ ಹಾಗೂ ಜೆಸ್ ಜೊನಾಸ್ಸೆನ್ ಪ್ರಮುಖ ಬೌಲರ್ ಆಗಿದ್ದಾರೆ. ಮತ್ತೊಂದೆಡೆ, ಮೊದಲ ಬಾರಿ ಟ್ವೆಂಟಿ-20 ವಿಶ್ವಕಪ್‌ನ ಫೈನಲ್‌ಗೆ ತಲುಪಿರುವ ವೆಸ್ಟ್‌ಇಂಡೀಸ್ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.

ನ್ಯೂಝಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಬ್ರಿರ್ಟ್ನಿ ಕೂಪರ್(48 ಎಸೆತ, 61 ರನ್) ಚೊಚ್ಚಲ ಅರ್ಧಶತಕ ಸಿಡಿಸಿ ವಿಂಡೀಸ್ ತಂಡವನ್ನು ಫೈನಲ್‌ಗೆ ತಲುಪಿಸಿದ್ದರು. ವಿಂಡೀಸ್‌ನ ನಾಯಕಿ ಸ್ಟೆಫಾನಿ ಟೇಲರ್ ಒಟ್ಟು 187 ರನ್ ಗಳಿಸಿ ವಿಂಡೀಸ್‌ನ ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು.

8 ವಿಕೆಟ್‌ಗಳನ್ನು ಉರುಳಿಸಿರುವ ಟೇಲರ್ ಆಲ್‌ರೌಂಡರ್ ಆಗಿ ಮಿಂಚಿದ್ದಾರೆ. ಆಸ್ಟ್ರೇಲಿಯ ತಂಡ ವಿಂಡೀಸ್ ವಿರುದ್ಧ 8 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದು, ಎಲ್ಲ ಪಂದ್ಯಗಳನ್ನು ಜಯಿಸಿ ಅಜೇಯ ದಾಖಲೆ ಕಾಯ್ದುಕೊಂಡಿದೆ.

ಪಂದ್ಯ ಆರಂಭದ ಸಮಯ: ಮಧ್ಯಾಹ್ನ 2:30

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News