×
Ad

ವಿಶ್ವಕಪ್‌ ಜಯಿಸಿದ ವಿಂಡೀಸ್‌

Update: 2016-04-03 22:42 IST

 
 ಕೋಲ್ಕತಾ, ಎ.3:ಇಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ಇಂದು ಇಂಗ್ಲೆಂಡ್ ವಿರುದ್ಧ ವೆಸ್ಟ್‌ಇಂಡೀಸ್ 4 ವಿಕೆಟ್‌ಗಳ ಜಯ ಗಳಿಸಿದೆ.
ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ ಗೆಲುವಿಗೆ 156 ರನ್‌ಗಳ ಸವಾಲನ್ನು ಪಡೆದ ವೆಸ್ಟ್‌ಇಂಡೀಸ್ ತಂಡ19.4 ಓವರ್‌ಗಳಲ್ಲಿ6 ವಿಕೆಟ್ ನಷ್ಟದಲ್ಲಿ 161ರನ್ ಗಳಿಸುವ  ಮೂಲಕ ವಿಶ್ವ ಚಾಂಪಿಯನ್‌ ಪಟ್ಟವನ್ನು ಮತ್ತೊಮ್ಮೆ ವಶಪಡಿಸಿಕೊಂಡಿದೆ.
ಈ ಬಾರಿಯ ಪುರುಷರ ಹಾಗೂ ಮಹಿಳೆಯರ ವಿಭಾಗದ ಚುಟುಕು ವಿಶ್ವಕಪ್‌ ಟ್ರೋಫಿ ವಿಂಡೀಸ್‌ ಪಾಲಾಗಿದೆ. ಪುರುಷರ ವಿಶ್ವಕಪ್‌ನಲ್ಲಿ ವಿಂಡೀಸ್‌ ತಂಡ ಎರಡನೆ ಬಾರಿ ಚಾಂಪಿಯನ್‌ ಎನಿಸಿಕೊಂಡಿತು. ಇದೇ ವೇಳೆ  ಮಹಿಳಾ ತಂಡ  ಆಸ್ಟ್ರೇಲಿಯವನ್ನು ಮಣಿಸಿ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ವಿಂಡೀಸ್‌ನ ಪರ ಹೋರಾಟ ನಡೆಸಿದ ಸ್ಯಾಮುಯೆಲ್ಸ್ ಔಟಾಗದೆ 85ರನ್‌(66ಎ, 9ಬೌ,2ಸಿ) ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ ವಿಂಡಿಸ್‌ನ ಗೆಲುವಿಗೆ 19 ರನ್‌ ಬೇಕಿತ್ತು. ಬ್ರಾಥ್ ವೈಟ್‌ ಅವರು ಸೋಕ್ಸ್ ಅವರ  4 ಎಸೆತಗಳಲ್ಲಿ 4 ಸಿಕ್ಸರ್‌ ಸಿಡಿಸುವ ಮೂಲಕ 24 ರನ್‌ ಸೇರಿಸಿದರು. ಬ್ರಾಥ್‌ವೈಟ್‌ ಔಟಾಗದೆ 34 ರನ್‌(10ಎ, 1ಬೌ,4ಸಿ) ಗಳಿಸಿದರು.

ವಿಂಡೀಸ್‌ಗೆ ಸವಾಲು ಕಠಿಣವಾಗಿರದಿದ್ದರೂ, ಅದು ಆರಂಭದಲ್ಲೇ ಕಳಪೆ ಪ್ರದರ್ಶನ ನೀಡಿತು.ಅಗ್ರಸರದಿಯ ದಾಂಡಿಗರಾದ ಚಾರ್ಲ್ಸ್(1), ಲೆಂಡ್ಲ್ ಸಿಮನ್ಸ್ (0) ಮತ್ತು ಕ್ರಿಸ್ ಗೇಲ್(4) ನಿರ್ಗಮಿಸಿದರು.
 2.3 ಓವರ್‌ಗಳಲ್ಲಿ 11 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್‌ಗೆ ಸ್ಯಾಮುಯೆಲ್ ಮತ್ತು ಡ್ವೇನ್ ಬ್ರಾವೊ (25)ಆಸರೆ ನೀಡಿದರು. ಅವರು ನಾಲ್ಕನೆ ವಿಕೆಟ್‌ಗೆ 11.3 ಓವರ್‌ಗಳಲ್ಲಿ 75 ರನ್ ಸೇರಿಸಿದರು. ಬ್ರಾವ್ 25 ರನ್ ಗಳಿಸಿದರು.

ಸ್ಯಾಮುಯೆಲ್ 47 ಎಸೆತಗಳಲ್ಲಿ 6 ಬೌಂಡರಿಗಳ ಸಹಾಯದಿಂದ ಅರ್ಧಶತಕ ದಾಖಲಿಸಿದರು.

ಇಂಗ್ಲೆಂಡ್ 155/9:ಕೋಲ್ಕತಾ, ಎ.3: ಟ್ವೆಂಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಆಸ್ಟ್ರೇಲಿಯ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 155 ರನ್ ಗಳಿಸಿತ್ತು.

ವಿಂಡೀಸ್‌  ಎರಡನೆ ಬಾರಿ ವಿಶ್ವಕಪ್‌ ಜಯಿಸಿ ಇತಿಹಾಸ ಬರೆದಿದೆ. 

ಟಾಸ್ ಜಯಿಸಿದ ವೆಸ್ಟ್‌ಇಂಡೀಸ್ ಫೀಲ್ಡಿಂಗ್ ಆಯ್ದುಕೊಂಡಿತ್ತು. ಅದರೆ ಇಂಗ್ಲೆಂಡ್‌ಗೆ ದೊಡ್ಡ ಸವಾಲನ್ನು ಸೇರಿಸಲು ಸಾಧ್ಯವಾಗಲಿಲ್ಲ. ಬ್ರಾಥ್‌ವೈಟ್ (23ಕ್ಕೆ3), ಡ್ವೇಯ್ನೆ ಬ್ರಾವೋ (37ಕ್ಕೆ 3), ಬದ್ರೀ 16ಕ್ಕೆ 2 ಮತ್ತು ರಸೆಲ್ 21ಕ್ಕೆ 1 ವಿಕೆಟ್ ಉಡಾಯಿಸಿ ಇಂಗ್ಲೆಂಡ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.

ರೂಟ್ 54 ರನ್, ಬಟ್ಲರ್ 36, ಸೋಕ್ಸ್ 13 ರನ್ , ವಿಲಿ 21 ಮತ್ತು ಜೋರ್ಡನ್ 12 ರನ್ ಗಳಿಸಿ ತಂಡದ ಸ್ಕೋರ್140ರ ಗಡಿ ದಾಟಿಸಲು ನೆರವಾದರು.
ಇಂಗ್ಲೆಂಡ್ ಖಾತೆ ತೆರೆಯುವ ಮೊದಲೇ ಮೊದಲ ವಿಕೆಟ್ ಕಳೆದುಕೊಂಡಿತ್ತು. ಜೇಸನ್ ರಾಯ್(0) ತಾನು ಎದುರಿಸಿದ ಎರಡನೆ ಎಸೆತದಲ್ಲಿ ಬದ್ರಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
  ಅಲೆಕ್ಸ್ ಹೇಲ್ಸ್(1)ಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ರಸೆಲ್ ಅವಕಾಶ ನೀಡಲಿಲ್ಲ. ಆಗ ತಂಡದ ಸ್ಕೋರ್ 1.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 8ರನ್. ನಾಯಕ ಇಯಾನ್ ಮೊರ್ಗನ್ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಇಂಗ್ಲೆಂಡ್ 4.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 23 ರನ್.
 ಜೋ ರೂಟ್ ಮತ್ತು ಬಟ್ಲರ್ ನಾಲ್ಕನೆ ವಿಕೆಟ್‌ಗೆ 61 ರನ್ ಸೇರಿಸಿದರು. ಇದರೊಂದಿಗೆ ಇಂಗ್ಲೆಂಡ್ ಚೇತರಿಸಿಕೊಂಡಿತು. ತಂಡದ ಸ್ಕೋರ್ 11.2 ಓವರ್‌ಗಳಲ್ಲಿ 84 ರನ್ ತಲುಪುವಾಗ ಬಟ್ಲರ್ ಔಟಾದರು.


   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News