×
Ad

"ನೀವು 11 ರಾಜ್ಯಗಳಿಗೆ ದುಡ್ಡೇ ಕೊಟ್ಟಿಲ್ಲ ! ಅವರೇನು ಭಿಕ್ಷೆ ಬೇಡಬೇಕಾ'' ?

Update: 2016-04-05 19:07 IST

ಹೊಸದಿಲ್ಲಿ, ಎ.5: ಕೆಲವು ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳಿಗೆ ಹಣ ನೀಡಿದ್ದೀರಿ.ಹನ್ನೊಂದು ರಾಜ್ಯಗಳಿಗೆ ದುಡ್ಡೇ ಕೊಟ್ಟಿಲ್ಲ. ಅವರೇನು ಭಿಕ್ಷೆ ಬೇಡಬೇಕಾ ? ಎಂದು ಭಾರತೀಯ ಕ್ರಿಕೆಟ್ ಮಂಡಳಿಯನ್ನು ಇಂದು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಹೀಗಾದರೆ ನಿಮ್ಮಿಂದ ದೇಶದಲ್ಲಿ ಕ್ರಿಕೆಟ್‌ನ ಅಭಿವೃದ್ಧಿ ಅಸಾಧ್ಯ ಎಂದು ಅಭಿಪ್ರಾಯಪಟ್ಟಿದೆ.
   ನಿವೃತ್ತ ನ್ಯಾಯಮೂರ್ತಿ ಲೋಧಾ ನೇತೃತ್ವದ ಸಮಿತಿಯು 2013ರ ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣ ಹಿನ್ನೆಲೆಯಲ್ಲಿ ಕ್ರಿಕೆಟ್‌ನ ಸುಧಾರಣೆಗೆ ಸಲ್ಲಿಸಿರುವ ಶಿಫಾರಸುಗಳಿಗೆ ಸಂಬಂಧಿಸಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ‘‘ನೀವು(ಬಿಸಿಸಿಐನ ಸದಸ್ಯರು ) ನಿಮಗೆ ಲಾಭವಾಗುವ ವ್ಯವಸ್ಥೆಯನ್ನು ರೂಪಿಸಿಕೊಂಡಿರುವಿರಿ’’ ಎಂದು ಅಭಿಪ್ರಾಯಪಟ್ಟಿದೆ.
 ಬಿಸಿಸಿಐಗೆ ಸಂಯೋಜನೆಗೊಂಡಿರುವ ಕ್ರಿಕೆಟ್ ಸಂಸ್ಥೆಗಳಿಗೆ ಅನುದಾನ ಹಂಚಿಕೆಯ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಮ್ ಕೋರ್ಟ್ ‘‘ ಬಿಸಿಸಿಐ ವಿವಿಧ ರಾಜ್ಯಗಳಲ್ಲಿ ಕ್ರಿಕೆಟ್‌ನ ಮೂಲಭೂತ ಆವಶ್ಯಕತೆಗಳಿಗೆ ವರ್ಷಕ್ಕೆ 480 ಕೋಟಿ ರೂ. ಪಾವತಿಸಿದೆ. ಕಳೆದ 20 ವರ್ಷಗಳ ಅವಧಿಯಲ್ಲಿ ಸುಮಾರು 2,000 ಕೋಟಿ ರೂ. ಹಣ ನೀಡಲಾಗಿದೆ. ನೀವು ನೀಡಿರುವ ಹಣ ಸದುಪಯೋಗವಾಗಿರುವ ಬಗ್ಗೆ ನಿಮ್ಮಲ್ಲಿ ಸರಿಯಾದ ಲೆಕ್ಕೆ ಇದೆಯೇ ಎಂದು ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ನ್ಯಾಯಪೀಠ ‘‘ ಗುಜರಾತ್ ರಾಜ್ಯಕ್ಕೆ 66 ಕೋಟಿ ರೂ. ಹಣ ನೀಡಲಾಗಿದೆ. ಈಶಾನ್ಯ ರಾಜ್ಯಗಳಿಗೆ ಬರೇ 50 ಲಕ್ಷ ರೂಪಾಯಿ ಯಾಕೆ ನೀಡಿದ್ದೀರಿ ?’’ ಎಂದು ಮಂಡಳಿಯನ್ನು ಪ್ರಶ್ನಿಸಿತು
   ಬಿಸಿಸಿಐ ಹಣದ ಹಂಚಿಕೆಯ ಬಗ್ಗೆ ಲೆಕ್ಕಪರಿಶೋಧನೆಗೊಳಪಟ್ಟ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು. ಈ ವರದಿಯಲ್ಲಿ 29 ರಾಜ್ಯಗಳ ಪೈಕಿ 11 ರಾಜ್ಯಗಳಿಗೆ ಕಳೆದ ಐದು ವರ್ಷಗಳ ಅವಧಿಯಲ್ಲಿ ನಯಾಪೈಸೆ ಅನುದಾನ ನೀಡದಿರುವುದನ್ನು ಗುರುತಿಸಿದ ಸುಪ್ರೀಂ ಕೋರ್ಟ್ ಬಿಸಿಸಿಐನ ಹಣದ ಹಂಚಿಕೆಯ ನೀತಿಯ ಬಗ್ಗೆ ಗರಂ ಆಗಿದೆ. ‘‘ಕಳೆದ ಆರು ವರ್ಷಗಳಲ್ಲಿ ಬಿಹಾರಕ್ಕೆ ಏನನ್ನೂ ನೀಡಿಲ್ಲ. ನೀವು ಹಣ ನೀಡದಿದ್ದರೆ ಕಡೆಗಣಿಸಲ್ಪಟ್ಟ ರಾಜ್ಯಗಳಲ್ಲಿ ಕ್ರಿಕೆಟ್‌ನ ಅಭಿವೃದ್ಧಿ ಹೇಗೆ ಸಾಧ್ಯ ? ನಿಮ್ಮಿಂದ ದೇಶದ ಕ್ರೀಡಾ ಅಭಿವೃದ್ಧಿಗೆ ಕೊಡುಗೆ ಏನೂ ಇಲ್ಲ ’’ ಎಂದು ಬಿಸಿಸಿಐನ ಕಾರ್ಯವೈಖರಿಯ ಬಗ್ಗೆ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ನ್ಯಾಯಪೀಠದ ನ್ಯಾಯಮೂರ್ತಿ ಎಫ್.ಎಂ.ಐ. ಕಲೀಫುಲ್ಲಾ ಅವರು ಬಿಸಿಸಿಐ ನಾಗಲ್ಯಾಂಡ್, ಮಣಿಪುರ ಮತ್ತು ತ್ರಿಪುರಾ ರಾಜ್ಯಗಳಿಗೆ ಕಳೆದ ಐದು ವರ್ಷಗಳಲ್ಲಿ ನೀಡಲಾದ ಅನುದಾನದ ಬಗ್ಗೆ ಬಿಸಿಸಿಐನಿಂದ ವಿವರ ಬಯಸಿದರು.
ಸುಪ್ರೀಂ ಕೋರ್ಟ್‌ನ ಸಂದೇಹಗಳಿಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ‘‘ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ರಿಕೆಟ್‌ನ ಅಭಿವೃದ್ಧಿ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಬಿಸಿಸಿಐನ ಸದಸ್ಯತ್ವ ಪಡೆದಿರುವ ಎಲ್ಲ ರಾಜ್ಯಗಳಿಗೂ ಬಿಸಿಸಿಐ ಅನುದಾನ ನೀಡುತ್ತಿದೆ. ಅರುಣಾಚಲ ಪ್ರದೇಶ ಮತ್ತು ಬಿಹಾರದ ಕ್ರಿಕೆಟ್ ಸಂಸ್ಥೆಗಳು ಲೆಕ್ಕಪರಿಶೋಧನೆಗೊಳಪಟ್ಟ ಲೆಕ್ಕಪತ್ರವನ್ನು ನೀಡಿಲ್ಲ. ಈ ಕಾರಣದಿಂದಾಗಿ 2010ರಿಂದ ಬಿಸಿಸಿಐ ಆ ಸಂಸ್ಥೆಗಳಿಗೆ ಅನುದಾನ ನೀಡಿಲ್ಲ’’ ಎಂದು ಹೇಳಿಕೆ ನೀಡಿದೆ.
ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News