×
Ad

ಟ್ವೆಂಟಿ-20 ವಿಶ್ವಕಪ್: ಭಾರತಕ್ಕೆ ಕೈಕೊಟ್ಟ ಅದೃಷ್ಟ

Update: 2016-04-05 23:34 IST

ಹೊಸದಿಲ್ಲಿ, ಎ.5: ಒಟ್ಟು 11 ಪಂದ್ಯಗಳ ಪೈಕಿ 10ರಲ್ಲಿ ಜಯ ಸಾಧಿಸಿ ಪ್ರಶಸ್ತಿ ಫೇವರಿಟ್ ಹಣೆಪಟ್ಟಿಯೊಂದಿಗೆ ಟ್ವೆಂಟಿ-20 ವಿಶ್ವಕಪ್ ಟೂರ್ನಿಗೆ ಪ್ರವೇಶಿಸಿದ್ದ ಭಾರತ ತಂಡ ಸ್ಟಾರ್ ದಾಂಡಿಗ ವಿರಾಟ್ ಕೊಹ್ಲಿ ಅವರ ಏಕಾಂಗಿ ಹೋರಾಟದ ನೆರವಿನಿಂದ ಸೆಮಿ ಫೈನಲ್‌ಗೆ ತಲುಪಿದ್ದರೂ, ಬೌಲರ್‌ಗಳು ಎಸೆದ 2 ನೋ-ಬಾಲ್ ಹಾಗೂ ವಿಂಡೀಸ್‌ನ ಬ್ಯಾಟ್ಸ್‌ಮನ್ ಸಿಮನ್ಸ್ ಆರ್ಭಟ ಮುಳುವಾಗಿ ಪರಿಣಮಿಸಿದರು.

ಭಾರತ ನಾಗ್ಪುರದಲ್ಲಿ ನಡೆದ ಸೂಪರ್-10ರ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 47 ರನ್‌ಗಳಿಂದ ಸೋಲುವುದರೊಂದಿಗೆ ಕಳಪೆ ಆರಂಭವನ್ನು ಪಡೆದಿತ್ತು. ಭಾರತ ತಂಡ ನ್ಯೂಝಿಲೆಂಡ್‌ನ್ನು 7 ವಿಕೆಟ್ ನಷ್ಟಕ್ಕೆ 126 ರನ್‌ಗೆ ನಿಯಂತ್ರಿಸಿತ್ತು. ಆದರೆ, ಕಿವೀಸ್ ಸ್ಪಿನ್ನರ್‌ಗಳು ಭಾರತವನ್ನು ಕೇವಲ 79 ರನ್‌ಗೆ ಆಲೌಟ್ ಮಾಡಿದ್ದರು.

 ಮೊದಲ ಪಂದ್ಯದಲ್ಲಿ ಸೋತಿದ್ದ ಧೋನಿ ಪಡೆಗೆ ಮುಂದಿನ ಮೂರು ಪಂದ್ಯಗಳು ಅತ್ಯಂತ ಮುಖ್ಯವೆನಿಸಿದವು. ಕೋಲ್ಕತಾದಲ್ಲಿ ನಡೆದ ಮಳೆ ಬಾಧಿತ 18 ಓವರ್‌ಗೆ ಸೀಮಿತಗೊಂಡ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 5ಕ್ಕೆ 118 ರನ್‌ಗೆ ನಿಯಂತ್ರಿಸಿತ್ತು.

ಗೆಲ್ಲಲು ಸುಲಭ ಸವಾಲು ಪಡೆದಿದ್ದ ಭಾರತ ವಿರಾಟ್ ಕೊಹ್ಲಿ ನೇತೃತ್ವದಲ್ಲಿ 15.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತ್ತು. ಒಂದು ಹಂತದಲ್ಲಿ 23 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ಕೊಹ್ಲಿ ಸಾಹಸದ(ಔಟಾಗದೆ 55, 33 ಎಸೆತ) ನೆರವಿನಿಂದ 6 ವಿಕೆಟ್‌ಗಳ ಜಯ ಸಾಧಿಸಿತ್ತು.

ಬಾಂಗ್ಲಾದೇಶ ವಿರುದ್ಧದ 3ನೆ ಪಂದ್ಯದಲ್ಲಿ ಭಾರತ ಪ್ರಯಾಸದ ಗೆಲುವು ಸಾಧಿಸಿತು. ಬಾಂಗ್ಲಾದೇಶಕ್ಕೆ ಕೇವಲ 147 ರನ್ ಗುರಿ ನೀಡಿದ್ದ ಭಾರತ ಕೊನೆಯ ಓವರ್‌ನಲ್ಲಿ 1 ರನ್‌ನಿಂದ ರೋಚಕ ಗೆಲುವು ಸಾಧಿಸಿತ್ತು. ಬಾಂಗ್ಲಾ ವಿರುದ್ಧ ಗೆಲುವು ಸಾಧಿಸಿದ ನಂತರ ಭಾರತಕ್ಕೆ ಆಸ್ಟ್ರೇಲಿಯ ವಿರುದ್ಧದ ಪಂದ್ಯ ಕ್ವಾರ್ಟರ್ ಫೈನಲ್ ಪಂದ್ಯವಾಗಿ ಪರಿಣಮಿಸಿತ್ತು.

ಆಸೀಸ್‌ನ ವಿರುದ್ಧ 161 ರನ್ ಗುರಿ ಪಡೆದಿದ್ದ ಭಾರತ ಮತ್ತೊಮ್ಮೆ ಔಟಾಗದೆ ಅರ್ಧಶತಕ(82ರನ್, 51 ಎಸೆತ) ಬಾರಿಸಿದ ಕೊಹ್ಲಿಯ ನೆರವಿನಿಂದ 6 ವಿಕೆಟ್‌ಗಳ ಜಯ ಸಾಧಿಸಿ ಸೆಮಿ ಫೈನಲ್‌ಗೆ ಪ್ರವೇಶಿಸಿತ್ತು.

 ವೆಸ್ಟ್‌ಇಂಡೀಸ್ ವಿರುದ್ಧದ ಸೆಮಿ ಫೈನಲ್‌ನಲ್ಲಿ ದಾಂಡಿಗರ ಸಂಘಟಿತ ಪ್ರದರ್ಶನದ ಸಹಾಯದಿಂದ ಭಾರತ 2 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. ಕೊಹ್ಲಿ ಮತ್ತೊಮ್ಮೆ ಗರಿಷ್ಠ ಸ್ಕೋರರ್(89 ರನ್, 47 ಎಸೆತ) ಎನಿಸಿಕೊಂಡರು. ಆದರೆ, 193 ರನ್ ಗುರಿ ಪಡೆದಿದ್ದ ವಿಂಡೀಸ್ ಲೆಂಡ್ಲ್ ಸಿಮನ್ಸ್(ಔಟಾಗದೆ 82, 51 ಎಸೆತ) ಹಾಗೂ ಆ್ಯಂಡ್ರೆ ರಸ್ಸೆಲ್(ಔಟಾಗದೆ 43, 20 ಎಸೆತ) ಸಾಹಸದಿಂದ 2 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.

ಹೈ ಪಾಯಿಂಟ್ಸ್: ನ್ಯೂಝಿಲೆಂಡ್ ವಿರುದ್ಧ ಸೋತ ನಂತರ ಪಾಕಿಸ್ತಾನ, ಬಾಂಗ್ಲಾದೇಶ,ಆಸ್ಟ್ರೇಲಿಯ ವಿರುದ್ಧದ ಮಾಡು-ಮಡಿ ಪಂದ್ಯವನ್ನು ಜಯಿಸಿದ್ದು ಆತಿಥೇಯರ ಸಾಧನೆ ಎನ್ನಬಹುದು.

ಲೋ-ಪಾಯಿಂಟ್ಸ್: ಸೆಮಿ ಫೈನಲ್‌ನಲ್ಲಿ ದಾಂಡಿಗರ ಶ್ರೇಷ್ಠ ಪ್ರದರ್ಶನದ ನೆರವಿನಿಂದ 2 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿದ್ದ ಭಾರತ, ವಿಂಡೀಸ್‌ಗೆ ಏಳು ವಿಕೆಟ್‌ಗಳ ಗೆಲುವು ಸಾಧಿಸಲು ಅವಕಾಶ ನೀಡಿದ್ದು ದೊಡ್ಡ ಹಿನ್ನಡೆ ಎನಿಸಿಕೊಂಡಿತು. ವಿಂಡೀಸ್‌ನ್ನು 3 ಓವರ್‌ಗಳಲ್ಲಿ 19 ರನ್‌ಗೆ 2 ವಿಕೆಟ್‌ಗೆ ನಿಯಂತ್ರಿಸಿದ್ದ ಭಾರತ ಆ ನಂತರ ತನ್ನ ಹಿಡಿತ ಕಳೆದುಕೊಂಡಿತ್ತು. ಸಿಮನ್ಸ್ 18 ಹಾಗೂ 50 ರನ್ ಗಳಿಸಿದ್ದಾಗ ನೋ-ಬಾಲ್ ಮೂಲಕ ಜೀವದಾನ ನೀಡಿದ್ದು ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತ್ತು.

ಅತ್ಯಂತ ಬೆಲೆಬಾಳುವ ಆಟಗಾರ: ವಿರಾಟ್ ಕೊಹ್ಲಿ ಭಾರತದ ಬೆಲೆ ಬಾಳುವ ಆಟಗಾರ ಎನ್ನುವುದರಲ್ಲಿ ಅನುಮಾನವೇ ಇಲ್ಲ. 5 ಇನಿಂಗ್ಸ್‌ಗಳಲ್ಲಿ 3 ಅರ್ಧಶತಕವನ್ನು ಸಿಡಿಸಿದ್ದ ಕೊಹ್ಲಿ ಭಾರತವನ್ನು ಏಕಾಂಗಿಯಾಗಿ ಸೆಮಿ ಫೈನಲ್‌ಗೆ ತಲುಪಿಸಿದ್ದರು. 136.50ರ ಸರಾಸರಿಯಲ್ಲಿ 273 ರನ್ ಗಳಿಸಿದ್ದರು. ಆಸ್ಟ್ರೇಲಿಯ ವಿರುದ್ಧ ಔಟಾಗದೆ ಗಳಿಸಿದ್ದ 82 ರನ್ ಟ್ವೆಂಟಿ-20 ಕ್ರಿಕೆಟ್‌ನ ಶ್ರೇಷ್ಠ ಇನಿಂಗ್ಸ್ ಆಗಿದೆ. ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಮೊದಲು ಪ್ರಶಸ್ತಿ ಫೇವರಿಟ್ ಎನಿಸಿಕೊಂಡಿದ್ದ ಭಾರತದ ಪರ ವಿರಾಟ್ ಕೊಹ್ಲಿ ಹಾಗೂ ಆಶೀಷ್ ನೆಹ್ರಾ ಹೊರತುಪಡಿಸಿ ಉಳಿದವರು ಭಾರೀ ನಿರಾಸೆಗೊಳಿಸಿದರು.

ಸ್ಪಿನ್ನರ್‌ಗಳ ಪ್ರದರ್ಶನ ಕಳಪೆಯಾಗಿತ್ತು. ಒಂದಿಬ್ಬರು ಆಟಗಾರರ ಪ್ರದರ್ಶನವನ್ನು ನೆಚ್ಚಿಕೊಂಡಿದ್ದ ಭಾರತ ಸೆಮಿ ಫೈನಲ್‌ಗೆ ತಲುಪಿದ್ದೇ ದೊಡ್ಡ ಸಾಧನೆ ಎನಿಸಿಬಿಟ್ಟಿದೆ. ಚಾಂಪಿಯನ್ ವೆಸ್ಟ್‌ಇಂಡೀಸ್ ತಂಡ ಟೂರ್ನಿಯಲ್ಲಿ ದಾಖಲಿಸಿದ್ದ 5 ಗೆಲುವಿನಲ್ಲಿ ನಾಲ್ಕು ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದು ಆ ತಂಡದ ಸಾಂಘಿಕ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News