ವಿಂಡೀಸ್‌ನ ಉಭಯ ಚಾಂಪಿಯನ್ ತಂಡಕ್ಕೆ ತಾಯ್ನೆಡಿನಲ್ಲಿ ಭವ್ಯ ಸ್ವಾಗತ
ಬ್ರಿಡ್ಜ್‌ಟೌನ್, ಎ.6: ಐಸಿಸಿ ಟ್ವೆಂಟಿ-20 ವಿಶ್ವಕಪ್ ಚಾಂಪಿಯನ್ ವೆಸ್ಟ್‌ಇಂಡೀಸ್ ಮಹಿಳಾ ತಂಡ ಹಾಗೂ ಪುರುಷ ಚಾಂಪಿಯನ್ ತಂಡಗಳ ಕೆಲವು ಆಟಗಾರರು ತಾಯ್ನ್‌ಡಿಗೆ ವಾಪಸಾಗಿದ್ದು, ಎಲ್ಲರಿಗೂ ವೀರೋಚಿತ ಸ್ವಾಗತ ನೀಡಲಾಯಿತು. ಟ್ವೆಂಟಿ-20 ವಿಶ್ವಕಪ್‌ನ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿತ್ತು.
ಆಟಗಾರರು ಮಂಗಳವಾರ ಬ್ರಿಡ್ಜ್‌ಟೌನ್‌ನ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಕ್ರೀಡಾ ಸಚಿವರಾದ ಸ್ಟೀಫನ್ ಲಾಶ್ಲೇ ಹಾಗೂ ಟೂರಿಸಂ ಸಚಿವ ರಿಚರ್ಡ್ ಸೀಲಿ ಅವರೊಂದಿಗೆ ಬಾರ್ಬಡಾಸ್ ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷ, ಮಾಜಿ ವೇಗದ ಬೌಲರ್ ಜೊಯೆಲ್ ಗಾರ್ನರ್ ಭವ್ಯ ಸ್ವಾಗತ ನೀಡಿದರು ಎಂದು ಮೂಲಗಳು ತಿಳಿಸಿವೆ.
ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು, ಆಟಗಾರರ ಕುಟುಂಬ ಸದಸ್ಯರು ಹಾಗೂ ಹಿತೈಷಿಗಳು ಏರ್‌ಪೋರ್ಟ್‌ನಲ್ಲಿ ಆಟಗಾರರನ್ನು ಸ್ವಾಗತಿಸಿದರು.
‘‘ಮಹಿಳಾ ಹಾಗೂ ಪುರುಷರ ಕ್ರಿಕೆಟಿಗರು ಟ್ವೆಂಟಿ-20 ವಿಶ್ವಕಪ್‌ನ್ನು ಜಯಿಸುವ ಮೂಲಕ ಕೆರಿಬಿಯನ್‌ರ ಸಾಮರ್ಥ್ಯವನ್ನು ಜಗತ್ತಿಗೆ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಆಟಗಾರರ ಯಶಸ್ಸಿನ ಹಿಂದೆ ಕಠಿಣ ಶ್ರಮ ಹಾಗೂ ತ್ಯಾಗ ಅಡಗಿದೆ’’ ಎಂದು 1979ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಗಾರ್ನರ್ ಹೇಳಿದ್ದಾರೆ.
ವಿಶ್ವಕಪ್ ವಿಜೇತ ಮಹಿಳಾ ತಂಡದ ಎಲ್ಲ ಸದಸ್ಯೆಯರು ಸ್ವದೇಶಕ್ಕೆ ಮರಳಿದ್ದಾರೆ. ಪುರುಷರ ಚಾಂಪಿಯನ್ ತಂಡದ ಸುಲೇಮಾನ್ ಬೆನ್ ಹಾಗೂ ಅಶ್ಲೇ ನರ್ಸ್ ಅವರೊಂದಿಗೆ ಆ್ಯಂಡ್ರೆ ಫ್ಲೆಚರ್ ಹಾಗೂ ಸ್ಯಾಮುಯೆಲ್ ಬದ್ರಿ ಆಗಮಿಸಿದ್ದರು. ಕೆಲವು ಆಟಗಾರರು ಲಂಡನ್ ಮಾರ್ಗವಾಗಿ ಸ್ವದೇಶಕ್ಕೆ ಇನ್ನಷ್ಟೇ ಬರಬೇಕಾಗಿದೆ. ಇತರ ಆಟಗಾರರಾದ ಕ್ರಿಸ್ ಗೇಲ್, ಡ್ವೇಯ್ನಿ ಬ್ರಾವೊ, ಕಾರ್ಲಸ್ ಬ್ರಾಥ್‌ವೈಟ್, ಜೇಸನ್ ಹೋಲ್ಡರ್ ಹಾಗೂ ಲೆಂಡ್ಲ್ ಸಿಮನ್ಸ್ ಶನಿವಾರದಿಂದ ಆರಂಭವಾಗಲಿರುವ 9ನೆ ಆವೃತ್ತಿಯ ಐಪಿಎಲ್‌ನಲ್ಲಿ ಭಾಗವಹಿಸಲು ಭಾರತದಲ್ಲೇ ಉಳಿದುಕೊಂಡಿದ್ದಾರೆ.