ಕೋಚ್ ಹುದ್ದೆಗೆ ಯೋಚಿಸಿ ನಿರ್ಧಾರ: ದ್ರಾವಿಡ್
ಹೊಸದಿಲ್ಲಿ, ಎ.6: ‘‘ಭಾರತದ ಸೀನಿಯರ್ ತಂಡದ ಕೋಚ್ ಹುದ್ದೆ ವಹಿಸಿಕೊಳ್ಳುವ ಮೊದಲು ತನಗೆ ಸಮಯವಿದೆಯೇ, ತಾನು ಆ ಹುದ್ದೆಗೆ ಸಮರ್ಥವಿದ್ದೇನೆಯೇ ಎಂದು ಯೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವೆ’’ ಎಂದು ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ.
‘‘ನನ್ನ ಜೀವನದ ಈ ಹಂತದಲ್ಲಿ ನಾನು ತೆಗೆದುಕೊಳ್ಳುವ ಯಾವುದೇ ನಿರ್ಧಾರ ನನ್ನ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಕೋಚ್ ಹುದ್ದೆ ವಹಿಸಿಕೊಳ್ಳಲು ಸಿದ್ಧನಿದ್ದೇನೆ ಅಥವಾ ಸಿದ್ಧನಿಲ್ಲ ಎಂದು ಈಗಲೇ ಹೇಳಲು ಸಾಧ್ಯವಿಲ್ಲ’’ ಎಂದು ಟೀಮ್ ಇಂಡಿಯಾದ ಕೋಚ್ ಹುದ್ದೆ ವಹಿಸಿಕೊಳ್ಳಲು ತಾವು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ದ್ರಾವಿಡ್ ಉತ್ತರಿಸಿದರು.
43ರ ಹರೆಯದ ಭಾರತದ ಮಾಜಿ ನಾಯಕ ದ್ರಾವಿಡ್ ಪ್ರಸ್ತುತ ಭಾರತ ಎ ತಂಡ ಹಾಗೂ ಅಂಡರ್-19 ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮೆಂಟರ್ ಆಗಿ ನೇಮಕಗೊಂಡಿದ್ದಾರೆ.
‘‘ನಾನು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಾಕಷ್ಟು ಯೋಚಿಸುತ್ತೇನೆ. ಯಾವುದೇ ಜವಾಬ್ದಾರಿ ನಿಭಾಯಿಸಲು ಸಮಯಾವಕಾಶ, ಸಾಮರ್ಥ್ಯವಿದೆಯೇ ಎಂದು ಯೋಚಿಸಬೇಕು. ಆಗ ಮಾತ್ರ ಶೇ.100ರಷ್ಟು ಗಮನ ನೀಡಲು ಸಾಧ್ಯ. ಭಾರತದ ಕೋಚ್ ಹುದ್ದೆ ವಹಿಸಿಕೊಳ್ಳಲು ಸಾಕಷ್ಟು ಬದ್ಧತೆ ಹಾಗೂ ಸಮಯದ ಅಗತ್ಯವಿದೆ’’ ಎಂದು ದ್ರಾವಿಡ್ ಹೇಳಿದ್ದಾರೆ.