ಜಪಾನ್ ವಿರುದ್ಧ ಭಾರತ ಶುಭಾರಂಭ
ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಮೆಂಟ್
ಇಪೋ(ಮಲೇಷ್ಯಾ), ಎ.6: ಏಷ್ಯನ್ ಗೇಮ್ಸ್ ಚಾಂಪಿಯನ್ ಭಾರತ ಬುಧವಾರ ಇಲ್ಲಿ ಆರಂಭವಾದ 25ನೆ ಆವೃತ್ತಿಯ ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಮೆಂಟ್‌ನಲ್ಲಿ ಶುಭಾರಂಭ ಮಾಡಿದೆ.
ಸರ್ದಾರ್ ಸಿಂಗ್ ಸಾರಥ್ಯದ ಭಾರತ ಟೂರ್ನಿಯ ಮೊದಲ ಪಂದ್ಯದಲ್ಲಿ ಕೆಳ ರ್ಯಾಂಕಿನ ಜಪಾನ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿತು.
ಜಪಾನ್ 17ನೆ ನಿಮಿಷದಲ್ಲಿ ಕೆಂಜಿ ಕಿಟಝಾರೊ ಬಾರಿಸಿದ ಗೋಲಿನ ನೆರನಿಂದ ಆರಂಭದಲ್ಲೇ 1-0 ಮುನ್ನಡೆ ಸಾಧಿಸಿತ್ತು. ಡ್ರಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್(24ನೆ ನಿಮಿಷ) ಹಾಗೂ ನಾಯಕ ಸರ್ದಾರ್ ಸಿಂಗ್(32ನೆ) ತಲಾ ಒಂದು ಗೋಲು ಬಾರಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಈ ಗೆಲುವಿನೊಂದಿಗೆ ಭಾರತ ಪೂರ್ಣಾಂಕವನ್ನು ಗಳಿಸಿದೆ. ಭಾರತ ಪಂದ್ಯದ ಆರಂಭದಲ್ಲಿ ಗೋಲು ಬಾರಿಸುವ ಹಲವು ಅವಕಾಶವನ್ನು ಕೈಚೆಲ್ಲಿತು. ಸ್ಫೂರ್ತಿಯುತ ಪ್ರದರ್ಶನ ನೀಡಿದ ಜಪಾನ್ ಆಟಗಾರರು ಒಂದು ಹಂತದಲ್ಲಿ ಭಾರತದ ಡಿಫೆಂಡರ್‌ಗಳಿಗೆ ಒತ್ತಡ ಹೇರಲು ಯಶಸ್ವಿಯಾದರು.
17ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಜಪಾನ್ ಭಾರತದ ಗೋಲು ಕೀಪರ್ ಹರ್ಜೋತ್ ಸಿಂಗ್‌ರನ್ನು ವಂಚಿಸಿ ಗೋಲು ಖಾತೆ ತೆರೆಯಿತು. 24ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಚೆನ್ನಾಗಿ ಬಳಸಿಕೊಂಡ ಹರ್ಮನ್‌ಪ್ರೀತ್ ಭಾರತಕ್ಕೆ 1-1 ರಿಂದ ಸಮಬಲ ಸಾಧಿಸಲು ನೆರವಾದರು.
32ನೆ ನಿಮಿಷದಲ್ಲಿ ಜಪಾನ್‌ನ ಗೋಲ್‌ಕೀಪರ್ ತಕಾಶಿ ಯೊಶಿಕವಾರನ್ನು ವಂಚಿಸಿದ ನಾಯಕ ಸರ್ದಾರ್ ಸಿಂಗ್ ಭಾರತಕ್ಕೆ ನಿರ್ಣಾಯಕ 2-1 ಮುನ್ನಡೆ ಒದಗಿಸಿಕೊಟ್ಟರು.
ಭಾರತ ಗುರುವಾರ ನಡೆಯಲಿರುವ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ನಾವು ಇಂದು ನಿರೀಕ್ಷಿತ ಮಟ್ಟದ ಆರಂಭ ಪಡೆದಿಲ್ಲ. ನಾವು ಇನ್ನು ಹೆಚ್ಚು ಗೋಲು ಬಾರಿಸಬೇಕಾಗಿತ್ತು. ಪಂದ್ಯ ಮುಂದುವರಿದಂತೆ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಭಾರತದ ಮುಖ್ಯ ಕೋಚ್ ರೊಲ್ಯಾಂಟ್ ಒಲ್ಟಮನ್ಸ್ ತಿಳಿಸಿದ್ದಾರೆ.
ಪಾಕ್‌ಗೆ ಜಯ: ಇದಕ್ಕೆ ಮೊದಲು ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮುಹಮ್ಮದ್ ಖಾದರ್ ಬಾರಿಸಿದ ಎರಡು ಗೋಲುಗಳ ನೆರವಿನಿಂದ ಕೆನಡಾವನ್ನು 3-1 ಅಂತರದಿಂದ ಕೆಡವಿತು. 27ನೆ ನಿಮಿಷದಲ್ಲಿ ಫೀಲ್ಡ್ ಗೋಲು ಬಾರಿಸಿ ಪಾಕ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟ ಖಾದರ್ ಕೆಲವೇ ನಿಮಿಷದ ಬಳಿಕ ಪೆನಾಲ್ಟಿ ಕಾರ್ನರ್‌ನಲ್ಲಿ ಮತ್ತೊಂದು ಗೋಲು ಬಾರಿಸಿದರು.
ರಿಚರ್ಡ್ ಹಿಲ್‌ಡ್ರಿತ್ ಕೆನಡಾದ ಪರ ಏಕೈಕ ಗೋಲು ಬಾರಿಸಿದರು. 52ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದ ಮುಹಮ್ಮದ್ ಅರ್ಷಾದ್ ಪಾಕಿಸ್ತಾನಕ್ಕೆ 3-1 ಅಂತರದ ಗೆಲುವು ತಂದುಕೊಟ್ಟರು.