×
Ad

ಸೈನಾ, ಸಿಂಧು ಗೆಲುವಿನಾರಂಭ, ಶ್ರೀಕಾಂತ್, ಪ್ರಣಯ್‌ಗೆ ಸೋಲು

Update: 2016-04-06 23:43 IST

ಮಲೇಷ್ಯಾ ಓಪನ್ ಸೂಪರ್ ಸರಣಿ

 ಷಾ ಆಲಂ(ಮಲೇಷ್ಯಾ), ಎ.6: ಮಲೇಷ್ಯಾ ಓಪನ್ ಸೂಪರ್ ಸರಣಿಯಲ್ಲಿ ಮಹಿಳೆಯರ ವಿಭಾಗದಲ್ಲಿ ಸೈನಾ ನೆಹ್ವಾಲ್ ಹಾಗೂ ಪಿ.ವಿ. ಸಿಂಧು ಎರಡನೆ ಸುತ್ತಿಗೆ ಪ್ರವೇಶಿಸಿದ್ದಾರೆ.

ಬುಧವಾರ ಇಲ್ಲಿ ಆರಂಭವಾದ ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ ಭಾರತದ ಇಬ್ಬರು ಶಟ್ಲರ್‌ಗಳು ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ.

ಕಳೆದ ವಾರ ಇಂಡಿಯಾ ಓಪನ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದ ಸೈನಾ 550,000 ಯುಎಸ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯಲ್ಲಿ ಸಕಾರಾತ್ಮಕ ಆರಂಭ ಪಡೆದಿದ್ದಾರೆ. ಸೈನಾ ಥಾಯ್ಲೆಂಡ್‌ನ ನಿಟ್‌ಚಾವೊನ್ ಜಿಂದ್‌ಪಾಲ್‌ರನ್ನು 30 ನಿಮಿಷದಲ್ಲಿ ಪಂದ್ಯದಲ್ಲಿ 21-16, 21-7 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.

ಮೂರನೆ ಶ್ರೇಯಾಂಕದ ಸೈನಾ ಮುಂದಿನ ಸುತ್ತಿನಲ್ಲಿ ಕೊರಿಯಾದ ಬೇ ಯಿಯೊನ್‌ರನ್ನು ಎದುರಿಸಲಿದ್ದಾರೆ.

 ಆರನೆ ಶ್ರೇಯಾಂಕದ ಸಿಂಧು ಮತ್ತೊಂದು ಮಹಿಳೆಯರ ಸಿಂಗಲ್ಸ್‌ನಲ್ಲಿ ಚೀನಾದ ಬಿಂಗ್‌ಜಿಯಾವೊರನ್ನು 21-16, 21-17 ಗೇಮ್‌ಗಳಿಂದ ಮಣಿಸಿದರು. 40 ನಿಮಿಷಗಳಲ್ಲಿ ಗೆಲುವು ಸಾಧಿಸಿರುವ ಸಿಂಧು 2015ರ ಇಂಡೋನೇಷ್ಯಾ ಮಾಸ್ಟರ್ಸ್‌ ಹಾಗೂ 2016ರ ಸ್ವಿಸ್‌ಓಪನ್‌ನ ಸೋಲಿಗೆ ಸೇಡು ತೀರಿಸಿಕೊಂಡರು.

ಸಿಂಧು ಮುಂದಿನ ಸುತ್ತಿನಲ್ಲಿ ಕೊರಿಯಾದ ಸಂಗ್‌ಜೀ ಹ್ಯೂನ್‌ರನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ರಿಯೋ ಒಲಿಂಪಿಕ್ಸ್ ಆಕಾಂಕ್ಷಿ ಎಚ್‌ಎಸ್ ಪ್ರಣಯ್ ಹಾಗೂ ಕೆ.ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಮುಗ್ಗರಿಸುವುದರೊಂದಿಗೆ ನಿರಾಸೆಗೊಳಿಸಿದರು.

   ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ ಅವರು ಥಾಯ್ಲೆಂಡ್‌ನ ಬೂನ್ಸಕ್ ಪೊನ್ಸಾನ ವಿರುದ್ಧ 53 ನಿಮಿಷಗಳ ಹೋರಾಟದಲ್ಲಿ 21-23, 21-9,10-21ಗೇಮ್‌ಗಳ ಅಂತರದಿಂದ ಶರಣಾದರು . ಪೊನ್ಸಾನ ವಿರುದ್ಧ 3-1 ಗೆಲುವಿನ ದಾಖಲೆ ಪ್ರಯೋಜನಕ್ಕೆ ಬರಲಿಲ್ಲ. ಕಳೆದ ತಿಂಗಳು ಸ್ವಿಸ್ ಓಪನ್ ಪ್ರಶಸ್ತಿ ಜಯಿಸಿದ್ದ ಪ್ರಣಯ್, ಇಂಡಿಯಾ ಓಪನ್ ಚಾಂಪಿಯನ್ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ ಕಠಿಣ ಹೋರಾಟ ನೀಡಿದ ಹೊರತಾಗಿಯೂ 19-21, 20-22 ಗೇಮ್‌ಗಳ ಅಂತರದಿಂದ ಸೋತರು. ಪ್ರಣಯ್ ಇಂಡಿಯಾ ಓಪನ್ ಟೂರ್ನಿಯಲ್ಲೂ ಮೊದಲ ಸುತ್ತಿನಲ್ಲೇ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News