ಸೈನಾ, ಸಿಂಧು ಕ್ವಾರ್ಟರ್‌ಫೈನಲ್‌ಗೆ ಪ್ರವೇಶ
ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ
ಮಲೇಷ್ಯಾ, ಎ.7: ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲುವಿನ ಓಟವನ್ನು ಮುಂದುವರಿಸಿರುವ ಭಾರತದ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ. ಸಿಂಧು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಗುರುವಾರ ಇಲ್ಲಿ ನಡೆದ 550,000 ಯುಎಸ್ ಡಾಲರ್ ಬಹುಮಾನ ಮೊತ್ತದ ಸೂಪರ್ ಸರಣಿ ಪ್ರೀಮಿಯರ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಸಿಂಧು ಕೊರಿಯಾದ ಸಂಗ್‌ಜೀ ಹ್ಯೂರನ್ನು 47 ನಿಮಿಷಗಳ ಹೋರಾಟದಲ್ಲಿ 22-20, 21-17 ಗೇಮ್‌ಗಳ ಅಂತರದಿಂದ ಮಣಿಸಿದರು. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸೈನಾ ಅವರು ಕೊರಿಯಾದ ಬೇ ಯಿಯೋನ್ ಜೂ ಅವರನ್ನು 21-10, 21-16 ಗೇಮ್‌ಗಳ ಅಂತರದಿಂದ ಸುಲಭವಾಗಿ ಮಣಿಸಿದರು.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕವನ್ನು ಜಯಿಸಿದ್ದ ಸಿಂಧು, ಸಂಗ್‌ಜೀ ವಿರುದ್ದ ಹೈದರಾಬಾದ್‌ನಲ್ಲಿ ನಡೆದಿದ್ದ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಟೀಮ್ ಸ್ಪರ್ಧೆಯಲ್ಲಿ ಸೋತಿದ್ದರು. ಇದೀಗ ಆ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. ಸಿಂಧು ಕೊರಿಯಾದ ಆಟಗಾರ್ತಿಯ ವಿರುದ್ಧ 5-3 ಹೆಡ್-ಟು-ಹೆಡ್ ದಾಖಲೆ ಕಾಯ್ದುಕೊಂಡಿದ್ದಾರೆ.
20ರ ಹರೆಯದ ಸಿಂಧು ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ವಿಶ್ವದ ಮಾಜಿ ಚಾಂಪಿಯನ್ ಹಾಗೂ ಎರಡು ಬಾರಿ ಇಂಡಿಯಾ ಓಪನ್ ಪ್ರಶಸ್ತಿ ಜಯಿಸಿರುವ ಥಾಯ್ಲೆಂಡ್‌ನ ರಾಟ್ಚಾನಾಕ್ ಇಂತನಾನ್ ವಿರುದ್ಧ ಕಠಿಣ ಸವಾಲು ಎದುರಿಸಲಿದ್ದಾರೆ.
ಸೈನಾ ಥಾಯ್ಲೆಂಡ್‌ನ ಇನ್ನೋರ್ವ ಆಟಗಾರ್ತಿ ಪಾರ್ನ್‌ಟಿಪ್ ಬುರನಪ್ರಸೆರ್‌ಸಕ್‌ರನ್ನು ಎದುರಿಸಲಿದ್ದಾರೆ ಪಾರ್ನ್‌ಟಿಪ್ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಜಪಾನ್‌ನ ನೊರೊಮಿ ಒಕುಹರಾರನ್ನು 21-22, 22-20 ಗೇಮ್‌ಗಳ ಅಂತರದಿಂದ ಮಣಿಸಿ ಆಘಾತ ನೀಡಿದ್ದರು.
ಮೂರನೆ ಶ್ರೇಯಾಂಕದ ಸೈನಾ ಕೊರಿಯಾದ ಬೇ ವಿರುದ್ಧದ ಪಂದ್ಯದಲ್ಲಿ ಅರಂಭದಲ್ಲೇ 11-3 ಅಂತರದಿಂದ ಮುನ್ನಡೆ ಸಾಧಿಸಿದ್ದು, ಎದುರಾಳಿ ಆಟಗಾರ್ತಿಗೆ ತಿರುಗೇಟು ನೀಡಲು ಅವಕಾಶವನ್ನೇ ನೀಡಲಿಲ್ಲ. ಈ ಮೂಲಕ ಕೊರಿಯಾ ಆಟಗಾರ್ತಿಯ ವಿರುದ್ಧ ಆಡಿರುವ 13 ಪಂದ್ಯಗಳ ಪೈಕಿ 9ನೆ ಜಯ ಸಾಧಿಸಿದರು.