ಚೊಚ್ಚಲ ಐಪಿಎಲ್ ಆಡಲು ಮುಸ್ತಫಿಝುರ್ರಹ್ಮಾನ್ ರೆಡಿ
ಢಾಕಾ, ಎ.7: ಬಾಂಗ್ಲಾದೇಶದ ಯುವ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ತನ್ನ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ‘ಮುಕ್ತ ಮನಸ್ಸಿನಿಂದ’ ಆಡಲು ಸಿದ್ಧವಾಗಿದ್ದಾರೆ.
ಮುಸ್ತಫಿಝುರ್ರಹ್ಮಾನ್ ಯಾವುದೇ ನಿರ್ದಿಷ್ಟ ಗುರಿ ನಿಗದಿಪಡಿಸಿಲ್ಲ. ಆದರೆ, ವಿಶ್ವದ ಶ್ರೀಮಂತ ಟ್ವೆಂಟಿ-20 ಟೂರ್ನಿಯಲ್ಲಿ ಆಡುವ ಬಗ್ಗೆ ಒತ್ತಡಕ್ಕೆ ಸಿಲುಕಿಲ್ಲ. ಎ.9 ರಿಂದ ಆರಂಭವಾಲಿರುವ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ, ಇನ್ನಷ್ಟು ಪಳಗುವ ವಿಶ್ವಾಸದಲ್ಲಿದ್ದಾರೆ.
ಮುಸ್ತಫಿಝುರ್ರಹ್ಮಾನ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಹೈದರಾಬಾದ್ ಎ.12 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ನಾನು ಐಪಿಎಲ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅಲಿಗೆ ತೆರಳಿ ಬೌಲಿಂಗ್ ಮಾಡುವ ಬಗ್ಗೆ ಗಮನ ನೀಡುವೆ. ನನಗೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿಲ್ಲ. ಹಾಗಾಗಿ ಭಾರತದ ವೃತ್ತಿಪರ ವೀಕ್ಷಕವಿವರಣೆಗಾರರಾಗಿರುವ ವಿವಿಎಸ್ ಲಕ್ಷ್ಮಣ್‌ರನ್ನು ಭೇಟಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ ಎಂದು ಮುಸ್ತಫಿಝೂರ್ರಹ್ಮಾನ್ ಹೇಳಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಭಾರತ ವಿರುದ್ಧ ಏಕದಿನ ಸರಣಿಯ ವೇಳೆ ಶ್ರೇಷ್ಠ ಪ್ರದರ್ಶನ ನೀಡಿ ಬೆಳಕಿಗೆ ಬಂದ ಮುಸ್ತಫಿಝುರ್ರಹ್ಮಾನ್‌ರನ್ನು ಹೈದರಾಬಾದ್ ಫ್ರಾಂಚೈಸಿ ಮೆಂಟರ್ ವಿವಿಎಸ್ ಲಕ್ಷ್ಮಣ್ ಐಪಿಎಲ್‌ಗೆ ಶಿಫಾರಸು ಮಾಡಿದ್ದರು. ಭಾರತದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 3 ಪಂದ್ಯಗಳನ್ನು ಆಡಿದ್ದ ಅವರು ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದ್ದರು. ನ್ಯೂಝಿಲೆಂಡ್‌ನ ವಿರುದ್ಧ ಜೀವನಶ್ರೇಷ್ಠ (5-22) ಬೌಲಿಂಗ್ ಮಾಡಿದ್ದರು.