×
Ad

ವಿಶ್ವ ಚಾಂಪಿಯನ್ ಆಸ್ಟ್ರೇಲಿಯಕ್ಕೆ ಶರಣಾದ ಭಾರತ

Update: 2016-04-07 23:57 IST

ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಮೆಂಟ್

ಇಪೋ(ಮಲೇಷ್ಯಾ), ಎ.7: ಇಲ್ಲಿ ನಡೆಯುತ್ತಿರುವ 25ನೆ ಆವೃತ್ತಿಯ ಸುಲ್ತಾನ್ ಅಝ್ಲಾನ್ ಷಾ ಹಾಕಿ ಟೂರ್ನಮೆಂಟ್‌ನಲ್ಲಿ ತನ್ನ ಎರಡನೆ ಲೀಗ್ ಪಂದ್ಯದಲ್ಲಿ ಭಾರತ ತಂಡ ವಿಶ್ವ ಚಾಂಪಿಯನ್ ಆಸ್ಟ್ರೇಲಿಯದ ವಿರುದ್ಧ 1-5 ಗೋಲುಗಳ ಅಂತರದಿಂದ ಸೋಲುಂಡಿದೆ.

 ಗುರುವಾರ ನಡೆದ ಪಂದ್ಯದಲ್ಲಿ 8 ಬಾರಿ ಸುಲ್ತಾನ್ ಅಝ್ಲಾನ್ ಷಾ ಹಾಕಿ ಕಪ್‌ನ್ನು ಜಯಿಸಿರುವ ಆಸ್ಟ್ರೇಲಿಯ ತಂಡ ಭಾರತದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ.

ಆಸೀಸ್‌ನ ಪರ ಬ್ಲೇಕ್ ಗೋವರ್ಸ್‌(5ನೆ ನಿಮಿಷ), ಜಾಕಬ್ ವೆಟ್ಟನ್(13ನೆ ನಿಮಿಷ), ಎಡ್ಡಿ ಒಕ್ಕೆನ್‌ಡೆನ್(20ನೆ ನಿ.), ಸೈಮನ್ ಒರ್ಚರ್ಡ್(25ನೆ ನಿ.) ಹಾಗೂ ಮ್ಯಾಟ್ ಘೋಡ್ಸ್(53ನೆ ನಿ.) ತಲಾ ಒಂದು ಗೋಲು ಬಾರಿಸಿದರು.

ಭಾರತದ ಪರ ರೂಪಿಂದರ್ ಪಾಲ್ ಸಿಂಗ್ 8ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ ಮೂಲಕ ಏಕೈಕ ಗೋಲು ಬಾರಿಸಿದರು.

ಆಸ್ಟ್ರೇಲಿಯ ತಂಡ ರೌಂಡ್ ರಾಬಿನ್ ಲೀಗ್‌ನ ತನ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. ಭಾರತ ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತ್ತು.

 ಆಸ್ಟ್ರೇಲಿಯ 5ನೆ ನಿಮಿಷದಲ್ಲಿ ಗೋಲು ಖಾತೆ ತೆರೆಯಿತು. ಗೋವರ್ಸ್‌ ಪೆನಾಲ್ಟಿ ಕಾರ್ನರ್ ಅವಕಾಶದ ಮೂಲಕ ಗೋಲುಕೀಪರ್ ಹರ್ಜೋತ್ ಸಿಂಗ್‌ರನ್ನು ವಂಚಿಸಿ ಗೋಲು ಬಾರಿಸಿದರು. ಭಾರತ ಮೂರು ನಿಮಿಷದ ನಂತರ ರೂಪಿಂದರ್ ಪಾಲ್ ಸಿಂಗ್ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು.

ನಾಯಕ ಜಮ್ಮಿ ಡ್ವೆಯರ್ಸ್‌ 13ನೆ ನಿಮಿಷದಲ್ಲಿ ಆಸ್ಟ್ರೇಲಿಯದ ಪರ 2ನೆ ಗೋಲು ಬಾರಿಸಿದರು. ಎದುರಾಳಿಯ ಗೋಲು ವಲಯಕ್ಕೆ ನುಗ್ಗಿದ ಭಾರತ ಒತ್ತಡ ಹೇರಲು ಯತ್ನಿಸಿತು. ಆದರೆ, ಆಸ್ಟ್ರೇಲಿಯದ ಡಿಫೆಂಡರ್‌ಗಳು ಗೋಲು ನಿರಾಕರಿಸಿದರು.

 20ನೆ ನಿಮಿಷದಲ್ಲಿ ಭಾರತದ ಡಿಫೆನ್ಸ್ ಆಸ್ಟ್ರೇಲಿಯದ ಸ್ಟ್ರೈಕರ್ ಒಕ್ಕೆನ್‌ಡೆನ್‌ಗೆ ಸುಲಭ ಗೋಲು ನೀಡಿತು. ಐದು ನಿಮಿಷಗಳ ನಂತರ ಆಸ್ಟ್ರೇಲಿಯ ಮತ್ತೊಂದು ಗೋಲು ಬಾರಿಸಿ ಮುನ್ನಡೆಯನ್ನು 4-1ಕ್ಕೆ ಏರಿಸಿದರು. ಭಾರತಕ್ಕೆ 44ನೆ ನಿಮಿಷದಲ್ಲಿ ಗೋಲು ಬಾರಿಸುವ ಅವಕಾಶ ಲಭಿಸಿತ್ತು.

 ಮನ್‌ದೀಪ್ ಸಿಂಗ್ ಬಾರಿಸಿದ ಗೋಲು ಆಸ್ಟ್ರೇಲಿಯದ ಗೋಲುಕೀಪರ್ ತಡೆದರು. 53ನೆ ನಿಮಿಷದಲ್ಲಿ ಗೋಲು ಬಾರಿಸಿದ ಘೋಡ್ಸ್ ಆಸೀಸ್‌ಗೆ 5-1 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ತಂದುಕೊಟ್ಟರು.

ಭಾರತ ರವಿವಾರ ತನ್ನ ಮೂರನೆ ಲೀಗ್ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News