×
Ad

ವಿಂಡೀಸ್ ಸ್ಪಿನ್ನರ್ ಸುನೀಲ್ ನರೇನ್‌ಗೆ ಐಸಿಸಿ ಕ್ಲೀನ್‌ಚಿಟ್

Update: 2016-04-08 11:53 IST

ಕೆಕೆಆರ್‌ನ ಮೊದಲ ಪಂದ್ಯಕ್ಕೆ ನರೇನ್ ಅಲಭ್ಯ

ದುಬೈ, ಎ.8: ವೆಸ್ಟ್‌ಇಂಡೀಸ್‌ನ  ಸ್ಪಿನ್ನರ್ ಸುನೀಲ್ ನರೇನ್ ಬೌಲಿಂಗ್ ಶೈಲಿಯನ್ನು ಮರು ಪರೀಕ್ಷೆಗೆ ಗುರಿ ಪಡಿಸಿರುವ ಐಸಿಸಿ ವಿಶ್ವದಾದ್ಯಂತ ನಡೆಯಲಿರುವ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಲು ಅವಕಾಶ ನೀಡಿದೆ.

 ಐಪಿಎಲ್ ಟ್ವೆಂಟಿ-20 ಟೂರ್ನಿ ಆರಂಭವಾಗಲು ದಿನಗಣನೆ ಆರಂಭ ವಾಗಿರುವಾಗಲೇ ಐಸಿಸಿ ಈ ಮಹತ್ವದ ತೀರ್ಮಾನ ಮಾಡಿದೆ. ಐಸಿಸಿಯ ಈ ನಿರ್ಧಾರದಿಂದ ನರೇನ್ ನಿಟ್ಟುಸಿರು ಬಿಟ್ಟಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ನರೇನ್ ಎ.10 ರಂದು ನಡೆಯಲಿರುವ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ.

ಮುಂಬರುವ ದಿನಗಳಲ್ಲಿ ನರೇನ್ ಶಂಕಾಸ್ಪದ ಶೈಲಿಯಲ್ಲಿ ಬೌಲಿಂಗ್ ಮಾಡಿದರೆ ಅಂಪೈರ್‌ಗಳು ನಿರ್ದಾಕ್ಷಿಣ್ಯವಾಗಿ ವರದಿ ಸಲ್ಲಿಸಲು ಐಸಿಸಿ ಅವಕಾಶ ನೀಡಿದೆ. ನರೇನ್ ಬೌಲಿಂಗ್ ಶೈಲಿಯ ಮರು ಪರೀಕ್ಷೆಯು ಮಾ.28 ರಂದು ಚೆನ್ನೈನ ಶ್ರೀರಾಮಚಂದ್ರ ಯುನಿವರ್ಸಿಟಿಯಲ್ಲಿ ನಡೆಸಲಾಗಿತ್ತು.

ನ.7, 2015ರಲ್ಲಿ ಶ್ರೀಲಂಕಾ ವಿರುದ್ಧ ಪಲ್ಲೆಕಲ್‌ನಲ್ಲಿ ನಡೆದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ವೇಳೆ ನರೇನ್ ವಿರುದ್ಧ ಮತ್ತೊಮ್ಮೆ ಶಂಕಾಸ್ಪದ ಬೌಲಿಂಗ್ ಶೈಲಿಯ ಆರೋಪ ಕೇಳಿಬಂದಿತ್ತು.

ಐಸಿಸಿ ತಕ್ಷಣವೇ ಅವರನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲಿಂಗ್ ನಡೆಸದಂತೆ ನಿಷೇಧ ಹೇರಿತ್ತು. ನರೇನ್ ಈ ಹಿಂದೆಯೂ ಒಂದು ವರ್ಷಗಳ ಕಾಲ ಬೌಲಿಂಗ್ ಶೈಲಿಯನ್ನು ಸರಿಪಡಿಸಿಕೊಳ್ಳುವ ಸಲುವಾಗಿ ವೆಸ್ಟ್‌ಇಂಡೀಸ್ ತಂಡದಿಂದ ಹೊರಗುಳಿದಿದ್ದರು.

ವಿಂಡೀಸ್ ಕ್ರಿಕೆಟ್ ಮಂಡಳಿಯು 2016ರ ಟ್ವೆಂಟಿ-20 ವಿಶ್ವಕಪ್‌ನ ಮೊದಲ ತಂಡದಲ್ಲಿ ನರೇನ್‌ಗೆ ಸ್ಥಾನ ನೀಡಿತ್ತು. ಬೌಲಿಂಗ್ ಶೈಲಿಯಲ್ಲಿ ಸಮರ್ಪಕ ಪ್ರಗತಿಯಾಗದ ಹಿನ್ನೆಲೆಯಲ್ಲಿ ಅವರ ಹೆಸರನ್ನು ಹಿಂದಕ್ಕೆ ಪಡೆದಿತ್ತು.

2014ರ ಚಾಂಪಿಯನ್ಸ್ ಲೀಗ್‌ನಲ್ಲಿ ಶಂಕಾಸ್ಪದ ಬೌಲಿಂಗ್ ಶೈಲಿಗೆ ಗುರಿಯಾಗಿದ್ದ ನರೇನ್ 2015ರ ಐಪಿಎಲ್‌ನಲ್ಲಿ ಎರಡನೆ ಬಾರಿ ಬೌಲಿಂಗ್ ಶೈಲಿಯಲ್ಲಿ ಲೋಪ ಕಂಡುಬಂದಿದ್ದರೂ ಬಿಸಿಸಿಐ ಅಂತಿಮ ಎಚ್ಚರಿಕೆಯನ್ನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News