ವಿಶ್ವಕಪ್ ಅಂತಿಮ ಓವರ್ ಆಘಾತದಿಂದ ಇನ್ನೂ ಹೊರಬರದ ಬೆನ್ ಸ್ಟೋಕ್ಸ್

Update: 2016-04-08 07:24 GMT

ಲಂಡನ್, ಎ.8:ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ಫೈನಲ್‌ನ ಅಂತಿಮ ಓವರ್‌ನಲ್ಲಿ ವಿಂಡೀಸ್‌ನ ಆಲ್‌ರೌಂಡರ್ ಕಾರ್ಲಸ್ ಬ್ರಾತ್‌ವೈಟ್ ಬಾರಿಸಿದ್ದ ಭರ್ಜರಿ ಸಿಕ್ಸರ್‌ಗಳ ಶಾಕ್‌ನಿಂದ ಇಂಗ್ಲೆಂಡ್‌ನ ವೇಗದ ಬೌಲರ್ ಬೆನ್ ಸ್ಟೋಕ್ಸ್ ಇನ್ನೂ ಚೇತರಿಸಿಕೊಂಡಿಲ್ಲ.

‘‘ನನ್ನ ಪಾಲಿಗೆ ಘೋರ ಪ್ರದರ್ಶನವಾಗಿರುವ ಕಾರ್ಲಸ್ ಬ್ರಾತ್‌ವೈಟ್ ಬಾರಿಸಿದ ಆ ನಾಲ್ಕು ಸಿಕ್ಸರ್‌ಗಳನ್ನು ಈವರೆಗೆ ನೋಡಿಲ್ಲ’’ ಎಂದು ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹೇಳಿದ್ದಾರೆ.

ನ್ಯೂಝಿಲೆಂಡ್ ವಿರುದ್ಧದ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಅಂತಿಮ ಓವರ್ ಎಸೆಯುವ ಜವಾಬ್ದಾರಿ ಪಡೆದಿದ್ದ ಸ್ಟೋಕ್ಸ್ ಆ ಓವರ್‌ನಲ್ಲಿ ಕೇವಲ 3 ರನ್ ನೀಡಿ ಇಂಗ್ಲೆಂಡ್‌ಗೆ ರೋಚಕ ಗೆಲುವು ತಂದುಕೊಟ್ಟಿದ್ದರು. ವಿಂಡೀಸ್ ವಿರುದ್ಧ ರವಿವಾರ ಕೋಲ್ಕತಾದಲ್ಲಿ ನಡೆದ ವಿರುದ್ಧ ಫೈನಲ್ ಪಂದ್ಯದಲ್ಲಿ ಮತ್ತೊಮ್ಮೆ ಅಂತಿಮ ಓವರ್ ಎಸೆಯುವ ಅವಕಾಶ ಸ್ಟೋಕ್ಸ್‌ಗೆ ಲಭಿಸಿತ್ತು. ಫೈನಲ್ ಪಂದ್ಯದ 20ನೆ ಓವರ್‌ನಲ್ಲಿ ವಿಂಡೀಸ್ ಗೆಲುವಿಗೆ 19 ರನ್ ಅಗತ್ಯವಿತ್ತು. ಆದರೆ, ಸ್ಟೋಕ್ಸ್ ಎಸೆದ ಸತತ 4 ಎಸೆತಗಳಲ್ಲ್ಲೂ ಭರ್ಜರಿ ಶತಕವನ್ನು ಬಾರಿಸಿದ ಬ್ರಾತ್‌ವೈಟ್ ವಿಂಡೀಸ್ ಟ್ವೆಂಟಿ-20 ಇತಿಹಾಸದಲ್ಲಿ ಎರಡನೆ ಬಾರಿ ಚಾಂಪಿಯನ್ ಆಗಲು ನೆರವಾಗಿದ್ದರು. ಇಂಗ್ಲೆಂಡ್ ಬೌಲರ್ ಸ್ಟೋಕ್ಸ್ ಕಣ್ಣೀರು ಹಾಕುವಂತೆ ಮಾಡಿದ್ದರು.

‘‘ಇಂಗ್ಲೆಂಡ್ ತಂಡ ವಿಶ್ವಕಪ್‌ನ್ನು ಕಳೆದುಕೊಂಡಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಾನು ಅಂತಿಮ ಓವರ್‌ನ ಆಘಾತದಿಂದ ಇನ್ನೂ ಹೊರ ಬಂದಿಲ್ಲ. ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ನನಗೆ ಮೊದಲಿನ ಮನಸ್ಥಿತಿಗೆ ಬರಲು ಇನ್ನು ಸಾಕಷ್ಟು ಸಮಯ ಬೇಕು. ನನಗಂತೂ ಇಡೀ ವಿಶ್ವವೇ ನನ್ನ ಮೇಲೆ ಬಿದ್ದಿರುವ ಅನುಭವವಾಗುತ್ತಿದೆ. ನನ್ನ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳೇ ಬರುತ್ತಿಲ್ಲ. ಕಣ್ಣಮುಂದೆ ನಿರ್ನಾಮವಾದ ಚಿತ್ರ ಮೂಡುತ್ತಿದೆ’’ ಎಂದು ಬ್ರಿಟನ್ ದಿನಪತ್ರಿಕೆ ‘ಡೈಲಿ ಟೆಲಿಗ್ರಾಫ್’ಗೆ ಶುಕ್ರವಾರ ನೀಡಿದ ಸಂದರ್ಶನದಲ್ಲಿ ಸ್ಟೋಕ್ಸ್ ಹೇಳಿದ್ದಾರೆ.

‘‘ನಾನು ಫೈನಲ್ ಪಂದ್ಯದ ಆ ಕೆಟ್ಟ ಓವರ್‌ನ್ನು ಮತ್ತೊಮ್ಮೆ ನೋಡಿಲ್ಲ. ಏಕೆಂದರೆ ನಾನು ಅಂತಹ ಬೌಲಿಂಗ್ ಮಾಡಲು ಇಷ್ಟಪಡಲಾರೆ. ಕೆಲವು ದಿನಗಳು ಒಳ್ಳೆಯದಿರುತ್ತದೆ. ಇನ್ನೂ ಕೆಲವು ದಿನ ಒಳ್ಳೆಯದಿರದು. ಆ ಒಂದು ಕೆಟ್ಟ ಓವರ್‌ನಿಂದಾಗಿ ಮುಂದಿನ ದಿನಗಳಲ್ಲಿ ಡೆತ್ ಓವರ್ ಬೌಲಿಂಗ್ ಮಾಡುವುದರಿಂದ ನುಣುಚಿಕೊಳ್ಳಲಾರೆ’’ ಎಂದು ಸ್ಟೋಕ್ಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News