×
Ad

ಐಪಿಎಲ್ ಆರಂಭಕ್ಕೆ ಮೊದಲೇ ಗಾಯಗೊಂಡ ಆಟಗಾರರು

Update: 2016-04-09 23:25 IST

ಹೊಸದಿಲ್ಲಿ, ಎ.9: 9ನೆ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಈಗಾಗಲೇ ಉದ್ಘಾಟನೆಗೊಂಡಿದೆ. ಆದರೆ, ಕೆಲವು ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದಾಗಿ ಸಂಪೂರ್ಣ ಟೂರ್ನಿ ಇಲ್ಲವೇ ಟೂರ್ನಿಯ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಗಾಯಗೊಂಡು ಟೂರ್ನಿಯಲ್ಲಿ ಭಾಗವಹಿಸದ ಐವರು ಆಟಗಾರರ ವಿವರ ಈ ಕೆಳಗಿನಂತಿದೆ....

ಯುವರಾಜ್ ಸಿಂಗ್: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ ವೇಳೆ ಮಂಡಿನೋವಿಗೆ ಒಳಗಾಗಿದ್ದ ಯುವರಾಜ್ ಸಿಂಗ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಅವರು ಇನ್ನು ಎರಡು ವಾರ ಟೂರ್ನಿಯಲ್ಲಿ ಭಾಗವಹಿಸುವ ಸ್ಥಿತಿಯಲ್ಲಿಲ್ಲ. ಇದು ಹೈದರಾಬಾದ್ ತಂಡಕ್ಕೆ ಹಿನ್ನಡೆಯಾಗಿದೆ. ಆಸ್ಟ್ರೇಲಿಯ ವಿರುದ್ಧದ ಮಹತ್ವದ ಲೀಗ್ ಪಂದ್ಯದಲ್ಲಿ ಗಾಯಗೊಂಡಿದ್ದ ಯುವಿ ವೆಸ್ಟ್‌ಇಂಡೀಸ್ ವಿರುದ್ಧದ ಸೆಮಿ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು. ಯುವರಾಜ್ ಅಲಭ್ಯತೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಹೈದರಾಬಾದ್ ತಂಡದ ಕೋಚ್ ಟಾಮ್ ಮೂಡಿ, ಯುವಿ ಯಾವಾಗ ಫಿಟ್ ಆಗುತ್ತಾರೊ ಗೊತ್ತಿಲ್ಲ ಎಂದು ಹೇಳಿದ್ದಾರೆ. ಪಂಜಾಬ್‌ನ ಎಡಗೈ ದಾಂಡಿಗ ಯುವಿ ಈ ವರ್ಷ 7 ಕೋಟಿ ರೂ.ಗೆ ಹೈದರಾಬಾದ್ ಪಾಲಾಗಿದ್ದರು. ಫೆಬ್ರವರಿಯಲ್ಲಿ ನಡೆದಿದ್ದ ಆಟಗಾರರ ಹರಾಜಿನಲ್ಲಿ ಮೂರನೆ ಗರಿಷ್ಠ ಮೊತಕ್ಕೆ ಹರಾಜಾದ ಆಟಗಾರನಾಗಿದ್ದರು.

ಲಸಿತ್ ಮಾಲಿಂಗ:

  ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಐಪಿಎಲ್ ಕ್ರಿಕೆಟ್ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ವೇಗಿ ಲಸಿತ್ ಮಾಲಿಂಗರ ಸ್ವಿಂಗ್ ಯಾರ್ಕರ್‌ನ್ನು ನೋಡುವುದರಿಂದ ವಂಚಿತರಾಗಲಿದ್ದಾರೆ. ‘ಸ್ಲಿಂಗ್ ಮಾಲಿಂಗ’ ಖ್ಯಾತಿಯ ಶ್ರೀಲಂಕಾದ ಬೌಲರ್ ಕಳೆದ ಋತುವಿನಲ್ಲಿ ಮುಂಬೈನ ಪರ 15 ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಕಬಳಿಸಿ ಚಾಂಪಿಯನ್ ಪಟ್ಟಕ್ಕೇರಲು ಪ್ರಮುಖ ಕಾಣಿಕೆ ನೀಡಿದ್ದರು. ಮಾಲಿಂಗ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಮೊದಲೇ ಮಂಡಿನೋವಿಗೆ ತುತ್ತಾಗಿದ್ದರು. ಮಾಲಿಂಗ ಐಪಿಎಲ್‌ನಲ್ಲಿ ಆಡಿರುವ 98 ಪಂದ್ಯಗಳಲ್ಲಿ ಒಟ್ಟು 143 ವಿಕೆಟ್‌ಗಳನ್ನು ಗಳಿಸಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಮಾಲಿಂಗ 2009 ರಿಂದ ಮುಂಬೈ ತಂಡದಲ್ಲಿದ್ದಾರೆ.

ಮಾಲಿಂಗ ವಿಶ್ವಕಪ್ ಪೂರ್ವ ನಡೆದ ಅಭ್ಯಾಸ ಪಂದ್ಯಗಳಲ್ಲಿ ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನದ ವಿರುದ್ಧ ಆಡಿದ್ದರು. ಆದರೆ, ಗಾಯದ ಸಮಸ್ಯೆ ಮರುಕಳಿಸಿದ ಕಾರಣ ಸ್ವದೇಶಕ್ಕೆ ವಾಪಸಾಗಿದ್ದರು.

ಜೊಯೆಲ್ ಪ್ಯಾರಿಸ್: ಜನವರಿಯಲ್ಲಿ ಭಾರತ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆಗೈದಿರುವ ಆಸ್ಟ್ರೇಲಿಯದ ವೇಗದ ಬೌಲರ್ ಜೊಯೆಲ್ ಪ್ಯಾರಿಸ್ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ 30 ಲಕ್ಷ ರೂ.ಗೆ ಹರಾಜಾಗಿದ್ದರು. ಅವರು ಈ ವರ್ಷ ಚೊಚ್ಚಲ ಐಪಿಎಲ್ ಪಂದ್ಯ ಆಡಬೇಕಾಗಿತ್ತು. ಆದರೆ,ಕಳೆದ ತಿಂಗಳು ಪರ್ತ್‌ನಲ್ಲಿ ನಡೆದ ದಕ್ಷಿಣ ಆಸ್ಟ್ರೇಲಿಯ ವಿರುದ್ಧದ ದೇಶೀಯ ಪಂದ್ಯದ ವೇಳೆೆ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಪ್ಯಾರಿಸ್ ಆಸ್ಟ್ರೇಲಿಯದ ಟಿ-20 ಟೂರ್ನಿ ಬಿಗ್ ಬಾಶ್‌ನಲ್ಲಿ ಪರ್ತ್ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಮಿಚೆಲ್ ಸ್ಟಾರ್ಕ್: ಕಳೆದ ವರ್ಷದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಗರಿಷ್ಠ ವಿಕೆಟ್‌ಗಳನ್ನು ಪಡೆದಿದ್ದ ಆಸ್ಟ್ರೆಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಈ ಬಾರಿ ಒಂದೂ ಪಂದ್ಯವನ್ನು ಆಡುತ್ತಿಲ್ಲ. 2015ರ ಆವೃತ್ತಿಯಲ್ಲಿ 13 ಪಂದ್ಯಗಳನ್ನು ಆಡಿದ್ದ ಸ್ಟಾರ್ಕ್ 6.76ರ ಇಕಾನಮಿ ರೇಟ್‌ನಲ್ಲಿ 20 ವಿಕೆಟ್‌ಗಳನ್ನು ಉರುಳಿಸಿದ್ದರು. ಕಳೆದ ವರ್ಷದ ನವೆಂಬರ್‌ನಲ್ಲಿ ಅಡಿಲೇಡ್‌ನಲ್ಲಿ ನಡೆದಿದ್ದ ನ್ಯೂಝಿಲೆಂಡ್ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯದ ವೇಳೆ ಕಾಲುನೋವಿಗೆ ಒಳಗಾದ ನಂತರ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದಾರೆ.

ಸ್ಯಾಮುಯೆಲ್ ಬದ್ರಿ:

ವೆಸ್ಟ್‌ಇಂಡೀಸ್ ಸ್ಪಿನ್ನರ್ ಸ್ಯಾಮುಯೆಲ್ ಬದ್ರಿ ಗಾಯಗೊಂಡಿರುವುದು ಆರ್‌ಸಿಬಿಗೆ ತೀವ್ರ ಹಿನ್ನಡೆಯಾಗಿದೆ. ಲೆಗ್ ಸ್ಪಿನ್ನರ್ ಬದ್ರಿ ಇತ್ತೀಚೆಗೆ ಕೊನೆಗೊಂಡ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ ಎರಡು ಪ್ರಮುಖ ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು. ಬದ್ರಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಲಿಯಾಮ್ ಪ್ಲಂಕೆಟ್‌ನೀಡಿದ ಕ್ಯಾಚ್ ಪಡೆಯುವ ಯತ್ನದಲ್ಲಿದ್ದಾಗ ಭುಜ ನೋವಿಗೆ ಒಳಗಾಗಿದ್ದರು. ಬದ್ರಿ ಈ ವರ್ಷದ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವ ಸಾಧ್ಯತೆ ಕಾಣುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News