×
Ad

ಇಂದು ಕೋಲ್ಕತಾ-ಡೆಲ್ಲಿ ಮುಖಾಮುಖಿ

Update: 2016-04-09 23:47 IST

ಎಲ್ಲರ ಕಣ್ಣು ವಿಂಡೀಸ್ ಆಲ್‌ರೌಂಡರ್ ಬ್ರಾಥ್‌ವೈಟ್‌ರತ್ತ

 ಕೋಲ್ಕತಾ, ಎ.9: ಒಂದು ವಾರದ ಹಿಂದೆ ಐತಿಹಾಸಿಕ ಈಡನ್‌ಗಾರ್ಡನ್ಸ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ಸ್ಫೋಟಕ ಇನಿಂಗ್ಸ್ ಆಡಿ ವಿಶ್ವದ ಗಮನ ಸೆಳೆದಿದ್ದ ವೆಸ್ಟ್‌ಇಂಡೀಸ್‌ನ ಆಲ್‌ರೌಂಡರ್ ಕಾರ್ಲೊಸ್ ಬ್ರಾಥ್‌ವೈಟ್ ರವಿವಾರ ಅದೇ ಮೈದಾನದಲ್ಲಿ ಆಡಲಿದ್ದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.

ಆದರೆ, ಈ ಬಾರಿ ಅವರು ಆಡುವುದು ವಿಂಡೀಸ್ ತಂಡದಲ್ಲಲ್ಲ. ಬದಲಿಗೆ ಐಪಿಎಲ್‌ನ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ. ಡೆಲ್ಲಿ ತಂಡ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ರವಿವಾರ ಇಲ್ಲಿ ಎದುರಿಸಲು ಸಜ್ಜಾಗಿದೆ.

ಕಳೆದ ರವಿವಾರ(ಎ.3) ನಡೆದ ಟ್ವೆಂಟಿ-20 ವಿಶ್ವಕಪ್ ಫೈನಲ್‌ನ ಅಂತಿಮ ಓವರ್‌ನಲ್ಲಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಎಸೆತದಲ್ಲಿ ಸತತ 4 ಸಿಕ್ಸರ್‌ಗಳನ್ನು ಸಿಡಿಸಿದ್ದ ಬ್ರಾಥ್‌ವೈಟ್ ವಿಂಡೀಸ್‌ಗೆ ರೋಚಕ ಗೆಲುವು ತಂದುಕೊಟ್ಟಿದ್ದರು.

ಬ್ರಾಥ್‌ವೈಟ್‌ರ ಅಬ್ಬರದ ಆಟ ಕೋಲ್ಕತಾ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಬ್ರಾಥ್‌ವೈಟ್ ಸೇರ್ಪಡೆಯಿಂದಾಗಿ ಡೆಲ್ಲಿ ತಂಡದ ಸ್ಫೂರ್ತಿ ಹೆಚ್ಚಿದೆ. ಐಪಿಎಲ್ ಟೂರ್ನಿಯಲ್ಲಿ ಈ ತನಕ ಡೆಲ್ಲಿಯ ಪ್ರದರ್ಶನ ಕಳಪೆ ಆಗಿದೆ. ಬ್ರಾಥ್‌ವೈಟ್ ಉಪಸ್ಥಿತಿಯಿಂದಾಗಿ ಡೆಲ್ಲಿ ತಂಡ ಕೋಲ್ಕತಾವನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯವಾಗಿದೆ.

ತವರು ನೆಲದಲ್ಲಿ ಉತ್ತಮ ದಾಖಲೆ ಹೊಂದಿರುವ ಕೆಕೆಆರ್ ತಂಡ ಐಪಿಎಲ್ ಟೂರ್ನಿಯಲ್ಲಿ ಮೂರನೆ ಬಾರಿ ಪ್ರಶಸ್ತಿ ಜಯಿಸಿ ದಾಖಲೆ ಬರೆಯುವ ವಿಶ್ವಾಸದಲ್ಲಿದೆ. ಕೋಲ್ಕತಾ ತಂಡದಲ್ಲಿ ಯಾವಾಗಲೂ ಪ್ರತಿಭಾವಂತರ ದಂಡೇ ಇರುತ್ತದೆ.

ಅತ್ತ, ಡೆಲ್ಲಿ ತಂಡದಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗಿದೆ. ಈ ವರ್ಷದ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ತಂಡ 4.2 ಕೋಟಿ ರೂ. ನೀಡಿ ಬ್ರಾಥ್‌ವೈಟ್‌ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.

 ಡೆಲ್ಲಿ ತಂಡದಲ್ಲಿ ರಾಜಸ್ಥಾನ ರಾಯಲ್ಸ್‌ನ ಹೆಚ್ಚಿನ ಆಟಗಾರರಿದ್ದಾರೆ. ರಾಹುಲ್ ದ್ರಾವಿಡ್ ಈ ತಂಡದ ಮೆಂಟರ್ ಆಗಿದ್ದಾರೆ. 37 ರಹರೆಯದ ಝಹೀರ್ ಖಾನ್ ಯುವ ಆಟಗಾರರನ್ನು ಮುನ್ನಡೆಸಲಿದ್ದಾರೆ. ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಫೈನಲ್‌ಗೆ ತಲುಪಲು ನೆರವಾಗಿದ್ದ ರಿಷಬ್ ಪಂತ್, ಮಹಿಪಾಲ್ ಹಾಗೂ ಖಲೀಲ್ ಅಹ್ಮದ್ ಡೆಲ್ಲಿ ತಂಡದಲ್ಲಿದ್ದಾರೆ.

ಈ ವರ್ಷದ ರಣಜಿ ಋತುವಿನಲ್ಲಿ ಚಾಂಪಿಯನ್ ಮುಂಬೈ ಪರ 1321 ರನ್ ಗಳಿಸಿರುವ ಶ್ರೇಯಸ್ ಅಯ್ಯರ್ ಡೆಲ್ಲಿ ತಂಡದ ಪ್ರಮುಖ ಆಟಗಾರ. ಸಂಜು ಸ್ಯಾಮ್ಸನ್, ಜೆಪಿ ಡುಮಿನಿ ಹಾಗೂ ವಿಕೆಟ್‌ಕೀಪರ್-ದಾಂಡಿಗ ಕ್ವಿಂಟನ್ ಡಿಕಾಕ್ ತಂಡಕ್ಕೆ ಆಸರೆಯಾಗಬಲ್ಲರು.

 2012ರಲ್ಲಿ ಕೊನೆಯ ಬಾರಿ ಸೆಮಿ ಫೈನಲ್ ತಲುಪಿರುವ ಡೆಲ್ಲಿ ತಂಡ ಈ ಬಾರಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ. ಕೆಕೆಆರ್‌ಗೆ ಈ ಬಾರಿ ದಕ್ಷಿಣ ಆಫ್ರಿಕದ ಶ್ರೇಷ್ಠ ಆಲ್‌ರೌಂಡರ್ ಜಾಕ್ ಕಾಲಿಸ್ ಕೋಚ್ ಆಗಿದ್ದಾರೆ. ಕಾಲಿಸ್‌ಗೆ ಕೋಲ್ಕತಾ ತಂಡಕ್ಕೆ ಕೋಚ್ ನೀಡುವುದು ದೊಡ್ಡ ಸವಾಲು. ತಂಡದ ಪ್ರಮುಖ ಸ್ಪಿನ್ನರ್ ಸುನೀಲ್ ನರೇನ್ ಐಸಿಸಿಯಿಂದ ಶಂಕಾಸ್ಪದ ಬೌಲಿಂಗ್ ಶೈಲಿಯಿಂದ ಮುಕ್ತವಾಗಿದ್ದು ಕೆಕೆಆರ್‌ಗೆ ನೆಮ್ಮದಿ ತಂದಿದೆ.

 ಡೆಲ್ಲಿಗೆ ಹೋಲಿಸಿದರೆ ಕೆಕೆಆರ್ ತಂಡ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ನಾಯಕ ಗೌತಮ್ ಗಂಭೀರ್ ಈ ಬಾರಿಯೂ ತಂಡದ ಉತ್ತಮ ಪ್ರದರ್ಶನ ಕಾಯ್ದುಕೊಳ್ಳಲು ಸಮರ್ಥರಾಗುತ್ತಾರೋ ಎಂದು ಕಾದುನೋಡಬೇಕಾಗಿದೆ.

ಪಶ್ಚಿಮ ಬಂಗಾಳದಲ್ಲಿ ಅಸೆಂಬ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಕೆಆರ್ ಈ ತಿಂಗಳಲ್ಲಿ ತವರು ನೆಲದಲ್ಲಿ ಕೇವಲ 2 ಪಂದ್ಯವನ್ನು ಆಡಲಿದೆ.

ತವರಿನಿಂದ ಹೊರಗೆ ಸತತ 6 ಪಂದ್ಯಗಳನ್ನು ಆಡುತ್ತದೆ. ಕಳೆದ ವರ್ಷ ಕೆಕೆಆರ್ 5ನೆ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತ್ತು. ಈ ಬಾರಿ ಕಾಲಿಸ್ ಮಾರ್ಗದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ತಂಡಗಳು:ಕೋಲ್ಕತಾ ನೈಟ್ ರೈಡರ್ಸ್: ಗೌತಮ್ ಗಂಭೀರ್(ನಾಯಕ), ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಯೂಸುಫ್ ಪಠಾಣ್, ಪಿಯೂಷ್ ಚಾವ್ಲಾ, ಕುಲ್‌ದೀಪ್ ಯಾದವ್, ಮನನ್ ಶರ್ಮ, ಅಂಕಿತ್ ರಾಜ್‌ಪೂತ್, ಆರ್. ಸತೀಶ್, ಜಯದೇವ್ ಉನದ್ಕಟ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಾನ್ ಹೆಸ್ಟಿಂಗ್ಸ್, ಬ್ರಾಡ್ ಹಾಗ್, ಜೇಸನ್ ಹೋಲ್ಡರ್, ಶೆಲ್ಡನ್ ಜಾಕ್ಸನ್, ಕ್ರಿಸ್ ಲಿನ್, ಮಾರ್ನೆ ಮಾರ್ಕೆಲ್, ಸುನೀಲ್ ನರೇನ್, ಕಾಲಿನ್ ಮುನ್ರೊ, ಆಂಡ್ರೆ ರಸ್ಸೆಲ್, ಶಾಕಿಬ್ ಅಲ್ ಹಸನ್.

ಡೆಲ್ಲಿ ಡೇರ್ ಡೆವಿಲ್ಸ್: ಝಹೀರ್ ಖಾನ್(ನಾಯಕ), ಕ್ವಿಂಟನ್ ಡಿಕಾಕ್, ಜೆಪಿ ಡುಮಿನಿ, ಮಯಾಂಕ್ ಅಗರ್‌ವಾಲ್, ಶ್ರೇಯಸ್ ಅಯ್ಯರ್, ಕಾರ್ಲೊಸ್ ಬ್ರಾಥ್‌ವೈಟ್, ಕರುಣ್ ನಾಯರ್, ಪವನ್ ನೇಗಿ, ರಿಷಬ್ ಪಂತ್, ಸಂಜು ಸ್ಯಾಮ್ಸನ್, ಪವನ್ ಸುಯಾಲ್, ಜಯಂತ್ ಯಾದವ್, ಕ್ರಿಸ್ ಮೊರಿಸ್, ಸ್ಯಾಮ್ ಬಿಲ್ಲಿಂಗ್ಸ್, ನಥನ್ ಕೌಲ್ಟರ್ ನೀಲ್, ಇಮ್ರಾನ್ ತಾಹಿರ್, ಮಹಿಪಾಲ್ ಲಾಮರ್, ಚಾಮಾ ಮಿಲಿಂದ್, ಅಮಿತ್ ಮಿಶ್ರಾ, ಮುಹಮ್ಮದ್ ಶಮಿ, ಶಹಬಾಝ್ ನದೀಮ್, ಖಲೀಲ್ ಅಹ್ಮದ್, ಅಖಿಲ್ ಹೇರ್ವಾಡ್ಕರ್ ಹಾಗೂ ಪ್ರತ್ಯುಷ್ ಸಿಂಗ್.

ಪಂದ್ಯದ ಸಮಯ: ರಾತ್ರಿ 8:00

ಐಪಿಎಲ್‌ನಲ್ಲಿ ಕೆಕೆಆರ್

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಕೋಲ್ಕತಾ ಕೊನೆಯ 2 ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದುಕೊಂಡಿದ್ದರೆ ಪ್ಲೇ ಆಫ್‌ಗೆ ಅರ್ಹತೆ ಪಡೆಯಬಹುದಿತ್ತು. ಆದರೆ, ಅದು ಆ ನಿಟ್ಟಿನಲ್ಲಿ ಯಶಸ್ಸು ಸಾಧಿಸಲಿಲ್ಲ. 2012ರಲ್ಲಿ ಕೆಕೆಆರ್ ಚೊಚ್ಚಲ ಪ್ರಶಸ್ತಿ ಜಯಿಸಿತ್ತು. 2013ರಲ್ಲಿ 7ನೆ ಸ್ಥಾನ ಪಡೆದಿತ್ತು. 2014ರಲ್ಲಿ ಎರಡನೆ ಬಾರಿ ಐಪಿಎಲ್ ಚಾಂಪಿಯನ್ ಎನಿಸಿಕೊಂಡಿತು. 2015ರಲ್ಲಿ ಐದನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಬಾರಿಯ ಐಪಿಎಲ್‌ನಲ್ಲಿ ಪ್ರಶಸ್ತಿ ಎತ್ತಲಿದೆಯೇಎಂದು ಮೇ 29ರ ತನಕ ಕಾದುನೋಡಬೆಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News