×
Ad

ಬರ್ಮಿಂಗ್‌ಹ್ಯಾಂನಲ್ಲಿ ಮೊಯಿನ್ ಅಲಿ ವಶಕ್ಕೆ

Update: 2016-04-10 13:55 IST

ಬರ್ಮಿಂಗ್‌ಹ್ಯಾಂ, ಎ10 ; ಇಂಗ್ಲೆಂಡ್ ಕ್ರಿಕೆಟಿಗ ಮೊಯಿನ್ ಅಲಿ ಅವರನ್ನು ಬರ್ಮಿಂಗ್‌ಹ್ಯಾಂ ವಿಮಾನ ನಿಲ್ದಾಣದಲ್ಲಿ "ವಿಮಾನ ನಿಲ್ದಾಣ ನಿಯಮ ಹಾಗೂ ನಿಬಂಧನೆ" ಅನ್ವಯ ಸುಮಾರು 40 ನಿಮಿಷಗಳ ಕಾಲ ತಡೆಹಿಡಿಯಲಾಯಿತು. ಇಂಗ್ಲೆಂಡ್ ಕೌಂಟಿ ಚಾಂಪಿಯನ್‌ಶಿಪ್‌ನ ಆರಂಭಿಕ ಪಂದ್ಯದಲ್ಲಿ ವೂಸ್ಟರ್‌ಶೈರ್ ತಂಡವನ್ನು ಸೇರಿಕೊಳ್ಳಲು ತೆರಳುತ್ತಿದ್ದ ಅವರನ್ನು ತಡೆಹಿಡಿಯಲಾಯಿತು.


ತಂಡದಿಂದ ಪ್ರತ್ಯೇಕಿತರಾಗಿ ಒಬ್ಬಂಟಿಯಾದ್ದರಿಂದ ಅವಮಾನಿತರಾದ ಅಲಿ ಟ್ವಿಟ್ಟರ್ ಮೂಲಕ ತಮ್ಮ ಹತಾಶೆ ಹೊರಹಾಕಿದರು. ವಿಭಿನ್ನ ವರ್ಗದವರು ಇಲ್ಲಿ ವೈವಿಧ್ಯಮಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರಿಂದ ವಿವಾದ ಮತ್ತಷ್ಟು ಜಟಿಲವಾಯಿತು. ಕೆಲವರಂತೂ, ಮೊಯಿನ್ ಅಲಿ ಐಸಿಸ್ ಉಗ್ರರಂತೆ ಕಾಣುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು.


ಹಿಂದೆಂದೂ ಇಂಥ ಅನುಭವವಾಗಿಲ್ಲ ಎಂದು 28 ವರ್ಷದ ಕ್ರಿಕೆಟಿಗ ಹೇಳಿದರು. ಮೊಯಿನ್ ಅಲಿ ಕುಟುಂಬ ಮೂಲತಃ ಕಾಶ್ಮೀರದವರಾಗಿದ್ದು, ಬ್ರಿಟಿಷ್ ಏಷ್ಯನ್ ಪ್ರಜೆಗಳಲ್ಲಿ ಮಾದರಿ ಎನಿಸಿಕೊಂಡವರು. ಇಂಗ್ಲಿಷ್ ಕ್ರಿಕೆಟ್‌ನಲ್ಲಿ ತಮ್ಮ ನೀಳ ಗಡ್ಡದ ಕಾರಣದಿಂದ ವಿಶೇಷವಾಗಿ ಗುರುತಿಸಿಕೊಳ್ಳುವ ಅಲಿ, ವಿ.ಜಿ.ಗ್ರೇಸ್ ಬಳಿಕ ಅಂಥ ಮತ್ತೊಬ್ಬ ಕ್ರಿಕೆಟಿಗ ಎನಿಸಿಕೊಂಡವರು. ಹುಟ್ಟೂರಲ್ಲೇ ಮೊಯಿನ್ ಅಲಿ ಅವಮಾನ ಎದುರಿಸಬೇಕಾಗಿ ಬಂದದ್ದು ವಿಶೇಷ.


ನನ್ನ ನಂಬಿಕೆಗಳು ಹಾಗೂ ಗಡ್ಡದ ಕಾರಣದಿಂದ ವಿಮಾನ ನಿಲ್ದಾಣದಲ್ಲಿ ನಿರ್ಬಂಧಿಸಲಾಯಿತು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡಿಲ್ಲ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News