ಐಪಿಎಲ್‌ನ ವೀಕ್ಷಕವಿವರಣೆಗಾರರ ತಂಡದಿಂದ ಹರ್ಷ ಭೋಗ್ಲೆ ಔಟ್!
ಹೊಸದಿಲ್ಲಿ, ಎ.10: ಭಾರತೀಯ ಟಿವಿ ಕ್ರಿಕೆಟ್‌ನ ವೀಕ್ಷಕವಿವರಣೆಗಾರರಲ್ಲಿ ಚಿರಪರಿಚಿತ ಹಾಗೂ ಜನಪ್ರಿಯ ಮುಖ ಹರ್ಷಾ ಭೋಗ್ಲೆ ಈಗ ನಡೆಯುತ್ತಿರುವ 9ನೆ ಆವೃತ್ತಿಯ ಐಪಿಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಬಿಸಿಸಿಐ ಭೋಗ್ಲೆ ಅವರೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದುಕೊಂಡಿರುವುದೇ ಇದಕ್ಕೆ ಕಾರಣ.
90ರ ದಶಕದ ಆರಂಭದಿಂದಲೇ ಭಾರತೀಯ ಕ್ರಿಕೆಟ್‌ನಲ್ಲಿ ವೀಕ್ಷಕವಿವರಣೆಗಾರರಾಗಿ ಗುರುತಿಸಿಕೊಂಡಿರುವ ಭೋಗ್ಲೆ ಐಪಿಎಲ್ ಆರಂಭವಾದಾಗಿನಿಂದ ಕಾಮೆಂಟ್ರಿ ಹೇಳುತ್ತಿದ್ದರು.
‘‘ಬಿಸಿಸಿಐ ಅಧಿಕೃತ ನಿರ್ಧಾರದ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಯಾರೂ ಏನೂ ತಿಳಿಸಿಲ್ಲ. ನನ್ನನ್ನು ಕೈಬಿಟ್ಟಿರುವ ಬಗ್ಗೆ ಕಾರಣವೂ ನೀಡಿಲ್ಲ. ಎಲ್ಲರೂ ಬಿಸಿಸಿಐ ಆಡಳಿತ ಮಂಡಳಿಯ ನಿರ್ಧಾರ ಎಂದು ಹೇಳುತ್ತಿದ್ದಾರೆ’’ ಎಂದು ಹರ್ಷಾ ಟ್ವೀಟರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಆಟಗಾರರಿಂದ ಅಭಿಪ್ರಾಯವನ್ನು ಪಡೆದ ನಂತರ ಬಿಸಿಸಿಐ ಇಂತಹ ಕಠಿಣ ನಿರ್ಧಾರಕ್ಕೆ ಬಂದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇತ್ತೀಚೆಗೆ ಭಾರತದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭೋಗ್ಲೆ ಅವರ ವೀಕ್ಷಕವಿವರಣೆಯ ಬಗ್ಗೆ ಕೆಲವರು ಟೀಕೆ ವ್ಯಕ್ತಪಡಿಸಿದ್ದರು.
ಭೋಗ್ಲೆ 9ನೆ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಕಾರ್ಯಕ್ರಮವನ್ನು ನಿರೂಪಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವೀಕ್ಷಕವಿವರಣೆ ತಂಡದಿಂದ ಕೈಬಿಟ್ಟಿರುವ ಬಿಸಿಸಿಐ ನಿರ್ಧಾರ ಅಚ್ಚರಿ ಮೂಡಿಸಿದೆ.
ವೀಕ್ಷಕವಿವರಣೆಗಾರರನ್ನು ನಿರ್ಧರಿಸುವಾಗ ಪ್ರತಿಯೊಬ್ಬರ ಅಭಿಪ್ರಾಯವನ್ನು ಪಡೆಯುತ್ತೇವೆ. ವೀಕ್ಷಕವಿವರಣೆಗಾರರ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಆಟಗಾರರ ಅಭಿಪ್ರಾಯವನ್ನು ಸಂಗ್ರಹಿಸುತ್ತೇವೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿ ಹೇಳಿದ್ದಾರೆ.