×
Ad

ಮಲೇಷ್ಯಾ ಓಪನ್: ಲೀ ಚೊಂಗ್ ವೀ ಚಾಂಪಿಯನ್

Update: 2016-04-10 23:54 IST

ಮಲೇಷ್ಯಾ, ಎ.10: ಮಲೇಷ್ಯಾದ ಬ್ಯಾಡ್ಮಿಂಟನ್ ಸ್ಟಾರ್ ಲೀ ಚೊಂಗ್ ವೀ 11ನೆ ಬಾರಿ ಮಲೇಷ್ಯಾ ಓಪನ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ಈ ಮೂಲಕ ಮುಂಬರುವ ಒಲಿಂಪಿಕ್ಸ್ ಕೂಟಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ.

ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಲೀ ವಿಶ್ವದ ನಂ.1 ಆಟಗಾರ ಚೆನ್ ಲಾಂಗ್‌ರನ್ನು 21-13, 21-8 ಗೇಮ್‌ಗಳ ಅಂತರದಿಂದ ಮಣಿಸಿದರು. ಮಾರ್ಚ್‌ನಲ್ಲಿ ನಡೆದಿದ್ದ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಹಾಗೂ ಇಂಡಿಯಾ ಓಪನ್‌ನಲ್ಲಿ ಬೇಗನೆ ಹೊರ ನಡೆದಿದ್ದ ಚೊಂಗ್ ವೀ ಮಲೇಷ್ಯಾ ಓಪನ್ ಟೂರ್ನಿಯುದ್ದಕ್ಕೂ ಉತ್ತಮ ಫಾರ್ಮ್ ಪ್ರದರ್ಶಿಸಿದರು. ಫೈನಲ್‌ನಲ್ಲಿ ಕೇವಲ 42 ನಿಮಿಷಗಳಲ್ಲಿ ಚೀನಾ ಆಟಗಾರನನ್ನು ಮಣಿಸಿ ಪ್ರಶಸ್ತಿ ಎತ್ತಿ ಹಿಡಿದರು.

 ‘‘ಕೆಲವು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿರುವುದಕ್ಕೆ ಟೀಕಾಕಾರರು ನಾನು ನಿವೃತ್ತಿಯಾಗಬೇಕೆಂದು ಆಗ್ರಹಿಸಿದ್ದರು. ಆದರೆ, ನನಗೆ ಆತ್ಮವಿಶ್ವಾಸವಿತ್ತು. ಪ್ರತಿಷ್ಠಿತ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವೂ ಇತ್ತು. ಈ ಗೆಲುವು ಟೀಕಾಕಾರರಿಗೆ ನೀಡಿದ ತಕ್ಕ ಉತ್ತರವಾಗಿದೆ. ಮಲೇಷ್ಯಾದಲ್ಲಿ ಮತ್ತೊಮ್ಮೆ ಪ್ರಶಸ್ತಿ ಜಯಿಸಿದ್ದಕ್ಕೆ ಸಂತೋಷವಾಗುತ್ತಿದೆ. ಒಲಿಂಪಿಕ್ಸ್‌ಗೆ ಮೊದಲು ಈ ಗೆಲುವು ನನಗೆ ಉತ್ತೇಜನಕಾರಿಯಾಗಿದೆ’’ಎಂದು 33ರ ಹರೆಯದ ಲೀ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News