ಕೋಲ್ಕತಾ ನೈಟ್‌ರೈಡರ್ಸ್‌ಗೆ ಸುಲಭದ ಜಯ
ಕೋಲ್ಕತಾ, ಎ.10: ಕೋಲ್ಕತಾನೈಟ್ ರೈಡರ್ಸ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯ 2ನೆ ಪಂದ್ಯದಲ್ಲಿ ಇಂದು ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ಧ 9 ವಿಕೆಟ್‌ಗಳ ಜಯ ಗಳಿಸಿದೆ.
ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 99 ರನ್‌ಗಳ ಸುಲಭದ ಸವಾಲು ಪಡೆದ ಕೋಲ್ಕತಾ ತಂಡ ಇನ್ನೂ 36 ಎಸೆತಗಳು ಬಾಕಿ ಇರುವಾಗಲೇ 1 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಸೇರಿಸಿ ಗೆಲುವಿನ ದಡ ಸೇರಿತು.
ನಾಯಕ ಗೌತಮ್ ಗಂಭೀರ್ ಔಟಾಗದೆ 38 ರನ್(41ಎ, 5ಬೌ), ರಾಬಿನ್ ಉತ್ತಪ್ಪ 35 ರನ್(33ಎ, 7ಬೌ) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆರಂಭಿಕ ದಾಂಡಿಗರಾದ ಉತ್ತಪ್ಪ ಮತ್ತು ಗಂಭೀರ್ ಮೊದಲ ವಿಕೆಟ್‌ಗೆ 9.4 ಓವರ್‌ಗಳಲ್ಲಿ 69 ರನ್ ಗಳಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಉತ್ತಪ್ಪ ಅವರು ಅಮಿತ್ ಮಿಶ್ರಾ ಓವರ್‌ನಲ್ಲಿ ಮೊರೀಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ನಾಯಕ ಗಂಭೀರ್ ಮತ್ತು ಮನೀಷ್ ಪಾಂಡೆ ಬ್ಯಾಟಿಂಗ್ ಮುಂದುವರಿಸಿ ಮುರಿಯದ ಜೊತೆಯಾಟದಲ್ಲಿ 30 ರನ್ ಸೇರಿಸಿದರು. ಪಾಂಡೆ ಔಟಾಗದೆ 15 ರನ್(12ಎ, 3ಬೌ) ಗಳಿಸಿದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ತಂಡ ಆ್ಯಂಡ್ರೆ ರಸೆಲ್(3-24), ಪಿಯೂಷ್ ಚಾವ್ಲಾ(2-21), ಬ್ರಾಡ್ ಹಾಗ್(3-19) ಮತ್ತು ಹಾಸ್ಟಿಂಗ್ಸ್(2-6) ದಾಳಿಗೆ ಸಿಲುಕಿ 17.4ಓವರ್‌ಗಳಲ್ಲಿ 98ರನ್‌ಗಳಿಗೆ ಆಲೌಟಾಗಿತ್ತು.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ 17 ರನ್ ಗಳಿಸಿರುವುದು ತಂಡದ ಪರ ಗರಿಷ್ಠ ಸ್ಕೋರ್. ಸಂಜು ಸ್ಯಾಮ್ಸನ್(15), ಪವನ್ ನೇಗಿ(11), ಕ್ರಿಸ್ ಮೋರಿಸ್(11) ಎರಡಂಕೆಯ ಸ್ಕೋರ್ ದಾಖಲಿಸಿದರು.
ಮಾಯಾಂಕ್ ಅಗರ್‌ವಾಲ್(9), ಕೆ.ಕೆ ನಾಯರ್(3),ಬ್ರಾಥ್‌ವೈಟ್(6) . ಕೌಲ್ಟರ್ ನೀಲ್(ಔಟಾಗದೆ 7), ಅಮಿತ್ ಮಿಶ್ರಾ(3) ಮತ್ತು ಝಹೀರ್ ಖಾನ್(4) ಒಂದಂಕೆಯ ಕೊಡುಗೆ ನೀಡಿದರು.