×
Ad

ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೇಮ್ಸ್ ಟೇಲರ್ ವೃತ್ತಿಜೀವನ ಅಕಾಲಿಕ ಅಂತ್ಯ?

Update: 2016-04-12 18:05 IST

26ನೆ ಹರೆಯದಲ್ಲಿ ನಿವೃತ್ತಿಗೆ ಕಾರಣವಾದ ಹೃದಯ ಸಮಸ್ಯೆ
ಲಂಡನ್, ಎ.12: ಹೃದಯ ಸಂಬಂಧಿತ ಗಂಭೀರ ಸಮಸ್ಯೆಗೆ ತುತ್ತಾಗಿರುವ ಇಂಗ್ಲೆಂಡ್‌ನ ಭರವಸೆಯ ಬ್ಯಾಟ್ಸ್‌ಮನ್ ಜೇಮ್ಸ್ ಟೇಲರ್ ತನ್ನ 26ನೆ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಕೌಂಟಿ ಕ್ರಿಕೆಟ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ತಂಡವನ್ನು ಪ್ರತಿನಿಧಿಸುತ್ತಿರುವ ಟೇಲರ್ ಕಳೆದ ವಾರ ವೈರಲ್ ಸೋಂಕಿನಿಂದಾಗಿ ಪಂದ್ಯದಿಂದ ಹಿಂದೆ ಸರಿದಿದ್ದರು. ಆದರೆ, ಅವರ ಸ್ಕಾನಿಂಗ್ ವರದಿಯಲಿ ಹೃದಯ ಗಂಭೀರ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ಟೇಲರ್ ಇನ್ನು ಕೆಲವೇ ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
 
 ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕದ ದಾಂಡಿಗರಾಗಿದ್ದ ಟೇಲರ್ ದೇಶದ ಪರ 2012 ಹಾಗೂ 2016ರ ನಡುವೆ 27 ಏಕದಿನ ಅಂತಾರಾಷ್ಟ್ರೀಯ ಪಂದ್ಯ, 7 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಕಳೆದ ವರ್ಷದ ಮೇನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದ ಅವರು ಕಳೆದ ವರ್ಷ ಒಟ್ಟು 691 ರನ್ ಗಳಿಸಿ ಇಂಗ್ಲೆಂಡ್‌ನ ಪರ ಏಕದಿನದಲ್ಲಿ ಮೂರನೆ ಗರಿಷ್ಠ ಸ್ಕೋರ್ ಗಳಿಸಿದ್ದರು.

‘‘ಆಕಸ್ಮಿಕ ಹಾಗೂ ಅನಿರೀಕ್ಷಿತ ರೀತಿಯಲ್ಲಿ ಟೇಲರ್ ವೃತ್ತಿಜೀವನ ಮೊಟಕುಗೊಳ್ಳುತ್ತಿರುವ ಸುದ್ದಿಯು ನನಗೆ ಆಘಾತ ಹಾಗೂ ಬೇಸರ ತಂದಿದೆ. ತನ್ನ ವೃತ್ತಿಜೀವನದುದ್ದಕ್ಕೂ ಟೇಲರ್ ಅವರು ಬದ್ಧತೆಯಿಂದ ಆಡಿದ್ದರು. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ನಾಟಿಂಗ್‌ಹ್ಯಾಮ್‌ಶೈರ್ ಕ್ಲಬ್‌ನೊಂದಿಗೆ ಕೈಜೋಡಿಸಿ ಟೇಲರ್‌ರನ್ನು ಕಷ್ಟದಿಂದ ಪಾರು ಮಾಡಲು ಹಾಗೂ ಬೇಗನೆ ಚೇತರಿಸಿಕೊಳ್ಳಲು ಎಲ್ಲ ರೀತಿಯ ನೆರವು ನೀಡಲಿದೆ’’ ಎಂದು ಇಂಗ್ಲೆಂಡ್ ಟೀಮ್ ಡೈರೆಕ್ಟರ್ ಆ್ಯಂಡ್ರೂ ಸ್ಟ್ರಾಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News