ಭಾರತವನ್ನು ಮಣಿಸಿದ ಆಸ್ಟ್ರೇಲಿಯ ಚಾಂಪಿಯನ್
ಇಪೊ, ಎ.16: ಸುಲ್ತಾನ್ ಅಝ್ಲಾನ್ ಷಾ ಕಪ್ ಹಾಕಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಇಂದು ಭಾರತವನ್ನು 4-0 ಅಂತರದಿಂದ ಮಣಿಸಿದ ಆಸ್ಟ್ರೇಲಿಯ 9ನೆ ಬಾರಿ ಟ್ರೋಫಿಯನ್ನು ಬಾಚಿಕೊಂಡಿದೆ.
ಆಸ್ಟ್ರೇಲಿಯದ ಥಾಮಸ್ ವಿಲಿಯಮ್ ಕ್ರೇಗ್( 25ನೆ ಮತ್ತು 35ನೆ ನಿಮಿಷ) ಮತ್ತು ಮ್ಯಾಟ್ ಗೋಯ್ಡೆಸ್ (43ನೆ,57ನೆ ನಿಮಿಷ) ತಲಾ 2 ಗೋಲು ದಾಖಲಿಸಿ ತಂಡದ ಭರ್ಜರಿ ಗೆಲುವಿಗೆ ನೆರವಾದರು.
ವಿಶ್ವ ಚಾಂಪಿಯನ್ ಮತ್ತು ವರ್ಲ್ಡ್ ನಂ.1ಆಸ್ಟ್ರೇಲಿಯ ತಂಡ ಭಾರತಕ್ಕೆ ಗೋಲು ಗಳಿಸಲು ಅವಕಾಶ ನೀಡದೆ ಗೆಲುವು ಸಾಧಿಸಿತು.
25ನೆ ನಿಮಿಷದಲ್ಲಿ ಕ್ರೇಗ್ ಆಸ್ಟ್ರೇಲಿಯದ ಗೋಲು ಖಾತೆ ತೆರೆದರು. ಬಳಿಕ 35ನೆ ನಿಮಿಷದಲ್ಲಿ ಇನ್ನೊಂದು ಗೋಲು ದಾಖಲಿಸಿ ತಂಡಕ್ಕೆ 2-0 ಮುನ್ನಡೆಗೆ ನೆರವಾದರು. ಕ್ರೇಗ್ ಎರಡು ಗೋಲುಗಳೊಂದಿಗೆ ಟೂರ್ನಿಯಲ್ಲಿ ಗಳಿಸಿದ ಗೋಲುಗಳ ಸಂಖ್ಯೆಯನ್ನು 4ಕ್ಕೆ ಏರಿಸಿದರು.
150ನೆ ಪಂದ್ಯವನ್ನಾಡುತ್ತಿರುವ ಗೋಯ್ಡೆಸ್ 43ನೆ ನಿಮಿಷದಲ್ಲಿ ಮತ್ತು 57ನೆ ನಿಮಿಷದಲ್ಲಿ ಗೋಲು ಕಬಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಐದು ಬಾರಿ ಚಾಂಪಿಯನ್ ಆಗಿರುವ ಭಾರತ ಕಳೆದ ವರ್ಷ ಮೂರನೆ ಸ್ಥಾನದೊಂದಿಗೆ ಕಂಚು ಪಡೆದಿತ್ತು. ಈ ವರ್ಷ ಎರಡನೆ ಸ್ಥಾನದೊಂದಿಗೆ ಬೆಳ್ಳಿ ಪಡೆದಿದೆ.