ನೀರಿನ ಬಾಟ್ಲಿಂಗ್ ಘಟಕಗಳೇ ಜಲಸಮಸ್ಯೆಗೆ ಮೂಲ!

Update: 2016-04-19 18:48 GMT

ಕಳೆದ ಮೂರು ವರ್ಷಗಳಲ್ಲಿ 144 ದೇಶೀಯ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳು, ಅಂತರ್ಜಲವನ್ನು ಉಚಿತವಾಗಿ ಪಡೆದು, ದುಬಾರಿ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡಲು ಕೇಂದ್ರ ಅಂತರ್ಜಲ ಪ್ರಾಧಿಕಾರ ಅವಕಾಶ ಮಾಡಿಕೊಟ್ಟಿದೆ.

ಈ ಪೈಕಿ ಕೇವಲ 24 ಕಂಪೆನಿಗಳು ಅಂತರ್ಜಲ ಮರುಪೂರಣ ಹಾಗೂ ಬಾಟ್ಲಿಂಗ್ ಘಟಕದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರಿನ ಪುನರ್ಬಳಕೆಯ ಬದ್ಧತೆ ಮೆರೆದಿವೆ. ಇಂಥ ಬಾಟ್ಲಿಂಗ್ ಘಟಕಗಳ ವಾರ್ಷಿಕ ವಹಿವಾಟು 1,000 ಕೋಟಿ ರೂಪಾಯಿ ಯನ್ನು ಮೀರಿದ್ದು, ಈ ಅಂತರ್ಜಲ ಮಾರಾಟ ದಂಧೆ ವಾರ್ಷಿಕ ಶೇ.40 ರಿಂದ 50ರಷ್ಟು ಪ್ರಗತಿ ದಾಖಲಿಸುತ್ತಿದೆ. ಆದರೆ ಈ ಘಟಕಗಳು ಕಾರ್ಯ ನಿರ್ವಹಿಸುವ ಪ್ರದೇಶದಲ್ಲಿ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಲೇ ಇದೆ.

ಹಲವು ವರ್ಷಗಳಿಂದ ಪರಿಸರವಾದಿಗಳು ಹಾಗೂ ನಾಗರಿಕ ಹೋರಾಟಗಾರರು ವ್ಯಕ್ತಪಡಿಸುತ್ತಾ ಬಂದ ಆತಂಕ ಇದೀಗ ನಿಜವಾಗಿದೆ. ಅಂತರ್ಜಲದ ಅತಿಶೋಷಣೆಯಿಂದಾಗಿ ಬಹಳಷ್ಟು ಮಂದಿಗೆ ನೀರಿನ ಲಭ್ಯತೆ ದುರ್ಲಭವಾಗಲಿದೆ ಎಂಬ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಹಲವು ಬಾಟ್ಲಿಂಗ್ ಘಟಕಗಳು ಕಾರ್ಯನಿರ್ವಹಿಸುತ್ತಿರುವ ದಿಲ್ಲಿ ಎನ್‌ಸಿಆರ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದಾಗ ಈ ಅಂಶವನ್ನು ದೃಢೀಕರಿಸುವ ಮಾಹಿತಿಗಳು ಬಹಿರಂಗವಾಗಿವೆ.
ಕೇಂದ್ರ ಅಂತರ್ಜಲ ಪ್ರಾಧಿಕಾರ ಅನುಮತಿ ನೀಡಿರುವ 144 ಕಂಪೆನಿಗಳು ಹರ್ಯಾಣ, ಪಂಜಾಬ್, ಆಂಧ್ರಪ್ರದೇಶ, ರಾಜಸ್ಥಾನ, ಕರ್ನಾಟಕ, ತಮಿಳುನಾಡು, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಡ, ಒಡಿಶಾ, ಜಾರ್ಖಂಡ್, ಉತ್ತರಾಖಂಡ, ಅಸ್ಸಾಂ, ಬಿಹಾರ, ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯ, ಅರುಣಾಚಲ ಪ್ರದೇಶ ಹಾಗೂ ಮಣಿಪುರ ರಾಜ್ಯಗಳಲ್ಲಿ ಬಾಟ್ಲಿಂಗ್ ಘಟಕಗಳನ್ನು ನಿರ್ವಹಿಸುತ್ತಿವೆ.

ವುಗಳಿಗೆ ನಿರಾಕ್ಷೇಪಣಾ ಪತ್ರ ನೀಡುವ ವೇಳೆ, ನಿರ್ದಿಷ್ಟ ಪ್ರಮಾಣದ ನೀರನ್ನು ಅಂತರ್ಜಲ ಮರುಪೂರಣ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ ಈ ಕಂಪೆನಿಗಳು ಒಂದು ಹನಿ ನೀರನ್ನೂ ಮರುಪೂರಣಕ್ಕೆ ಬಳಸುತ್ತಿಲ್ಲ.
ಪೆಪ್ಸಿಕೊ, ನಿಂಬೂಸ್, ಎಸ್‌ಎಂಜೆ, ಮಾಪ್ಲೆ, ಪುಷ್ಪಂ, ಎಚ್‌ಎಂ ಫುಡ್ಸ್ ಆ್ಯಂಡ್ ಮಿನರಲ್ಸ್, ಡಿಪಿಜಿ ಬೇವರೇಜಸ್, ರೋಸ್ ವ್ಯಾಲಿ ಇಂಡಸ್ಟ್ರೀಸ್, ಆರ್‌ಸಿಡಿ, ಪಿರಮಿಡ್ ಡ್ರಿಂಕ್ಸ್, ಖೇತಾನ್, ರಾಟಿ ಎಂಟರ್‌ಪ್ರೈಸಸ್, ಯಶೋಮಾಲಾ, ಬಿಐಎಲ್, ಜಿಡಿ ಫುಡ್ಸ್ ಹೀಗೆ ನೀರ್ಗಳ್ಳ ಕಂಪೆನಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತವೆ.

ಈ ಎಲ್ಲ ಕಂಪೆನಿಗಳಿಗೂ ಅಂತರ್ಜಲ ಮರುಪೂರಣ ಬಗ್ಗೆ ಪ್ರಶ್ನಾವಳಿ ನೀಡಿ ಪ್ರತಿಕ್ರಿಯೆ ಆಹ್ವಾನಿಸಲಾಗಿದೆ. ಈ ಪೈಕಿ ಯಶೋಮಾಲಾ ಪಾರ್ಮಿಂಗ್ ಎಂಬ ಒಂದು ಕಂಪೆನಿ ಮಾತ್ರ ಮಳೆನೀರು ಕೊಯ್ಲು ಹಾಗೂ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ ಎಂಬ ಮಾಹಿತಿ ನೀಡಿದೆ.
ಈ ಕಂಪೆನಿಗಳು ತೆಗೆಯುತ್ತಿರುವ ಅಂತರ್ಜಲ ಪ್ರಮಾಣವನ್ನು ಅಂದಾಜು ಮಾಡಿದಾಗ, ದಿಲ್ಲಿಯ ಪ್ರತಿ ನಾಗರಿಕರಿಗೂ ಒಂದು ದಿನ 700 ಲೀಟರ್ ಪೂರೈಸಬಹುದಾದಷ್ಟು ಪ್ರಮಾಣದ ನೀರನ್ನು ಇವು ಪಡೆಯುತ್ತಿವೆ ಎನ್ನುವುದು ತಿಳಿದುಬಂದಿದೆ. ಇದೇ ಪ್ರಮಾಣದಲ್ಲಿ ಅಂತರ್ಜಲ ಶೋಷಣೆ ನಡೆದರೆ ಮುಂದಿನ ಕೆಲವೇ ವರ್ಷಗಳಲ್ಲಿ ದಿಲ್ಲಿ ಜನ ನೀರಿಗಾಗಿ ಹಾಹಾಕಾರ ಎಬ್ಬಿಸುವ ಪರಿಸ್ಥಿತಿ ನಿರ್ಮಾಣವಾಗುವ ಅಪಾಯವಿದೆ.

ಇಂಥ ಕಂಪೆನಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮತ್ತು ದೊಡ್ಡ ಮೊತ್ತದ ದಂಡ ಹೇರುವಂತೆ ಆರ್‌ಟಿಐ ಕಾರ್ಯಕರ್ತ ಎನ್.ಕೆ.ಟಂಡನ್ ಆಗ್ರಹಿಸುತ್ತಾರೆ. ಹಲವು ಲಕ್ಷ ವರ್ಷಗಳಿಂದ ಕಾಪಾಡಿಕೊಂಡು ಬಂದ ಅಂತರ್ಜಲವನ್ನು ಈ ಕಂಪೆನಿಗಳು ಕೊಳ್ಳೆ ಹೊಡೆಯುತ್ತಿವೆ. ಈ ಮೂಲಕ ಭವಿಷ್ಯದ ಪೀಳಿಗೆಯ ಅಸ್ತಿತ್ವಕ್ಕೇ ಅಪಾಯ ತಂದೊಡ್ಡಿವೆ. ನಮ್ಮ ನಾಯಕರು ಅಥವಾ ಸರಕಾರಗಳು ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂದು ಅವರು ಹೇಳುತ್ತಾರೆ.
ಟಂಡನ್ ಸಲ್ಲಿಸಿದ ಆರ್‌ಟಿಐ ಪ್ರಶ್ನೆಗೆ ನೀಡಿದ ಉತ್ತರದಲ್ಲೇ 144 ಕಂಪೆನಿಗಳಿಗೆ ಅನುಮತಿ ನೀಡಿರುವ ಅಂಶವನ್ನು ಅಂತರ್ಜಲ ಪ್ರಾಧಿಕಾರ ಬಹಿರಂಗಪಡಿಸಿದೆ.
ಕೇವಲ ನಾಲ್ಕು ತಿಂಗಳು ಮಳೆ ಬೀಳುವ ಭಾರತದಂಥ ಪ್ರದೇಶದಲ್ಲಿ, ಜನ ದಿನಬಳಕೆಗೆ ಹಾಗೂ ಕೃಷಿ ಉದ್ದೇಶಕ್ಕೆ ಅಂತರ್ಜಲವನ್ನೇ ಅವಲಂಬಿಸಿದ್ದಾರೆ. ಆದರೆ ಅಂತರ್ಜಲದ ಅತಿಬಳಕೆ ಹಾಗೂ ದುರ್ಬಳಕೆ ಇಡೀ ಸಮುದಾಯವನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿದೆ ಎನ್ನುವುದು ಬಹಿರಂಗ ಸತ್ಯ.

ಅಂತರ್ಜಲ ಎನ್ನುವುದು ಖಚಿತವಾಗಿ ಸರಬರಾಜು ಆಗುವ ಜಲಮೂಲ. ದುರದೃಷ್ಟವಶಾತ್, ಇದು ವೇಗವಾಗಿ ಕೆಳಕ್ಕೆ ಹೋಗುತ್ತಿದೆ. ಉದಾಹರಣೆಗೆ ಗುರ್‌ಗಾಂವ್‌ನಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಬೆಳೆದಿದೆ. ಇದರ ಪರಿಣಾಮ ಭೀಕರ ಎಂದು ಜೆಎನ್‌ಯು ಸ್ಕೂಲ್ ಆಫ್ ಎನ್‌ವಿರಾನ್‌ಮೆಂಟ್ ಸೈನ್ಸ್‌ನ ಪ್ರಾಧ್ಯಾಪಕರಾದ ಸಿ.ಕೆ.ವರ್ಷಿಣಿ ಅಭಿಪ್ರಾಯಪಡುತ್ತಾರೆ.

Writer - ಮುಹಮ್ಮದ್ ಹಿಝ್ಬುಲ್ಲಾ

contributor

Editor - ಮುಹಮ್ಮದ್ ಹಿಝ್ಬುಲ್ಲಾ

contributor

Similar News