ಮೇ 1ರಂದು ಪುಣೆಯಲ್ಲಿ ಐಪಿಎಲ್ ಪಂದ್ಯ ನಡೆಸಲು ಬಾಂಬೆ ಹೈಕೋರ್ಟ್ ಅನುಮತಿ
ಮುಂಬೈ, ಎ.20: ಪುಣೆಯಲ್ಲಿ ಮೇ 1ರಂದು ನಿಗದಿಯಾಗಿರುವ ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಐಪಿಎಲ್ ಪಂದ್ಯವನ್ನು ಆಯೋಜಿಸಲು ಬಾಂಬೆ ಹೈಕೋರ್ಟ್ ಇಂದು ಅನುಮತಿ ನೀಡಿದೆ.
ಬರಗಾಲದ ಹಿನ್ನೆಲೆಯಲ್ಲಿ ಬಾಂಬೈ ಹೈಕೋರ್ಟ್ ಮಹಾರಾಷ್ಟ್ರದಲ್ಲಿ ಮೇ ತಿಂಗಳಲ್ಲಿ ನಿಗದಿಯಾಗಿದ್ದ ಫೈನಲ್ ಪಂದ್ಯ ಸೇರಿದಂತೆ ಎಲ್ಲ 13 ಪಂದ್ಯಗಳನ್ನು ಬೇರೆ ಕ್ರೀಡಾಂಗಣಗಳಿಗೆ ಸ್ಥಳಾಂತರಿಸುವಂತೆ ಆದೇಶ ನೀಡಿತ್ತು. ಆದರೆ ಎ.29ರಂದು ಪುಣೆಯಮಾಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಪುಣೆ ಮತ್ತು ಗುಜರಾತ್ ತಂಡಗಳ ನಡುವೆ ಪಂದ್ಯ ಇರುವ ಕಾರಣಕ್ಕಾಗಿ 24 ಗಂಟೆಗಳ ಒಳಗಾಗಿ ಪಂದ್ಯವನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಸಾಧ್ಯವಿಲ್ಲ. ಕ್ರೀಡಾ ಪರಿಕರಗಳನ್ನು ಸಾಗಿಸಲು ಕಾಲಾವಕಾಶ ಅಗತ್ಯವಿರುವ ಹಿನ್ನೆಲೆಯಲ್ಲಿ ಮೇ 1ರಂದು ಪುಣೆಯಲ್ಲಿ ಪಂದ್ಯಆಯೋಜಿಸಲು ಅನುಮತಿ ನೀಡುವಂತೆ ಬಿಸಿಸಿಐ ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿತ್ತು.
ಬಿಸಿಸಿಐ ಮಾಡಿರುವ ಮನವಿಯನ್ನು ಪುರಸ್ಕರಿಸಿರುವ ಬಾಂಬೆ ಹೈಕೋರ್ಟ್ ಮೇ1ರಂದು ಪುಣೆಯಲ್ಲಿ ಐಪಿಎಲ್ ಪಂದ್ಯ ನಡೆಸಲು ಬಿಸಿಸಿಐಗೆ ಅನುಮತಿ ನೀಡಿದೆ.
ಮಾಹಾರಾಷ್ಟ್ರದ ಮೂರು ಕ್ರಿಡಾಂಗಣಗಳಲ್ಲಿ ಮೇ ತಿಂಗಳಲ್ಲಿ ಒಟ್ಟು 13 ಪಂದ್ಯಗಳು ನಿಗದಿಯಾಗಿತ್ತು. ಈ ಪೈಕಿ ಇದೀಗ 12 ಪಂದ್ಯಗಳು ಮಾಹಾರಾಷ್ಟ್ರದಿಂದ ಸ್ಥಳಾಂತರಗೊಂಡಿದೆ. ಮೇ 29ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಐಪಿಎಲ್‌ನ ಫೈನಲ್ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿದೆ.