ರಿಯೋ ಒಲಿಂಪಿಕ್ಸ್‌ಗೆ ಸಲ್ಮಾನ್ ಖಾನ್ ರಾಯಭಾರಿ
ಹೊಸದಿಲ್ಲಿ, ಎ.23: ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಅಥ್ಲೆಟಿಕ್ಸ್ ತಂಡದ ರಾಯಭಾರಿ ಆಗಿ ಬಾಲಿವುಡ್ ನಟ ಸಲ್ಮಾನ್ ಖಾನ್‌ರನ್ನು ಆಯ್ಕೆ ಮಾಡಿರುವುದಕ್ಕೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಭಾರತದ ಕುಸ್ತಿಪಟು ಯೋಗೇಶ್ವರ್ ದತ್ತ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್(ಐಒಎ) ಶನಿವಾರ ಇಲ್ಲಿನ ಮುಖ್ಯ ಕಚೇರಿಯಲ್ಲಿ ಸಲ್ಮಾನ್ ಖಾನ್‌ರನ್ನು ಒಲಿಂಪಿಕ್ಸ್‌ನ ರಾಯಭಾರಿಯಾಗಿ ನೇಮಕ ಮಾಡಿದೆ. ರಾಯಭಾರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಲ್ಮಾನ್‌ರಲ್ಲದೆ, ಶಾರೂಖ್ ಖಾನ್ ಹಾಗೂ ಹಿರಿಯ ನಟ ಅಮಿತಾಭ್ ಬಚ್ಚನ್ ಕೂಡ ಇದ್ದರು. ಸಲ್ಮಾನ್ ಆಯ್ಕೆಗೆ ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ದತ್ತ್, ರಾಯಭಾರಿಯ ಕೆಲಸವೇನೆಂದು ನನಗೆ ಯಾರಾದರೂ ವಿವರಿಸಬಲ್ಲಿರಾ? ದೇಶದ ಜನರನ್ನು ಈ ರೀತಿ ಮೂರ್ಖರನ್ನಾಗಿ ಮಾಡುವುದು ಸರಿಯಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಯೋಗೇಶ್ವರ್ ರಿಯೋ ಒಲಿಂಪಿಕ್ಸ್‌ಗೆ ತಯಾರಿ ನಡೆಸಲು ಪ್ರಸ್ತುತ ಜಾರ್ಜಿಯಾದಲ್ಲಿದ್ದಾರೆ.