ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಾಜಿ ಕ್ರಿಕೆಟಿಗ ಅರುಣ್ ಲಾಲ್
ಹೊಸದಿಲ್ಲಿ, ಎ.23: ಭಾರತದ ಮಾಜಿ ಆರಂಭಿಕ ದಾಂಡಿಗ ಹಾಗೂ ಕ್ರಿಕೆಟ್ ವೀಕ್ಷಕ ವಿವರಣೆಗಾರ ಅರುಣ್ ಲಾಲ್ ‘ಅಪರೂಪದ ಹಾಗೂ ಅಪಾಯಕಾರಿ’ದವಡೆ ಕ್ಯಾನ್ಸರ್‌ಗೆ ತುತ್ತಾಗಿದ್ದು, ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ.
ಈ ವರ್ಷದ ಜನವರಿಯಲ್ಲಿ ಲಾಲ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. 14 ಗಂಟೆಗಳ ಸರ್ಜರಿಗೆ ಒಳಗಾಗಿದ್ದ ಅವರಿಗೆ ಬದಲಿ ದವಡೆಯನ್ನು ಜೋಡಿಸಲಾಗಿದೆ. ಇದೊಂದು ಅಪರೂಪದ ಹಾಗೂ ಅಪಾಯಕಾರಿ ಕ್ಯಾನ್ಸರ್. ಕಾಯಿಲೆಯ ಲಕ್ಷಣ ಸರಿಯಾದ ಸಮಯಕ್ಕೆ ಗೊತ್ತಾದ ತಕ್ಷಣವೇ ಸೂಕ್ತ ಚಿಕಿತ್ಸೆ ಪಡೆದಿದ್ದೇನೆ ಎಂದು ದಿ ಹಿಂದೂ ಪತ್ರಿಕೆಗೆ ಲಾಲ್ ತಿಳಿಸಿದ್ದಾರೆ.
2011ರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಗುರಿಯಾಗಿದ್ದ ಯುವರಾಜ್ ಸಿಂಗ್ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಿದ್ದರು.
ನಿಮ್ಮ ಭಾವನೆ ಏನೆಂಬುದು ನನಗೆ ಗೊತ್ತಾಗುತ್ತಿದೆ. ಏಕೆಂದರೆ ನಾನು ಅದರಿಂದ ಬಳಲಿದ್ದೇನೆ. ನಾವು ಬೇರೊಬ್ಬರೊಂದಿಗೆ ನೋವನ್ನು ಹಂಚಿಕೊಂಡರೆ ಹಗುರವಾಗುತ್ತೇವೆ. ರೋಗಿಗಳ ಮನಸ್ಥಿತಿ ನನಗೆ ಅರ್ಥವಾಗುತ್ತದೆ. ಏಕೆಂದರೆ, ಆ ಕಾಯಿಲೆಯು ನಮ್ಮನ್ನು ಮಾನಸಿಕವಾಗಿ ಸೋಲಿಸುತ್ತದೆ ಎಂದು ಯುವರಾಜ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಎರಡು ದಶಕಗಳ ವೃತ್ತಿಜೀವನದಲ್ಲಿ ಅರುಣ್ ಲಾಲ್ ಭಾರತದ ಪರ 16 ಟೆಸ್ಟ್ ಹಾಗೂ 13 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 1987ರಲ್ಲಿ ಕೋಲ್ಕತಾದಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸುನೀಲ್ ಗವಾಸ್ಕರ್ ಬದಲಿಗೆ ಆಡಿದ್ದ ಲಾಲ್ ಎರಡು ಅರ್ಧಶತಕ ಸಿಡಿಸಿದ್ದರು.
ಕೋಲ್ಕತಾದಲ್ಲಿ ವೆಸ್ಟ್‌ಇಂಡೀಸ್‌ನ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್ 93 ರನ್ ಗಳಿಸಿದ್ದರು. 1989-90ರಲ್ಲಿ ರಣಜಿ ಫೈನಲ್‌ನಲ್ಲಿ ಔಟಾಗದೆ ಅರ್ಧಶತಕ ಸಿಡಿಸಿದ್ದ ಅರುಣ್ ಲಾಲ್ ಬಂಗಾಳ ತಂಡ ರಣಜಿ ಜಯಿಸಲು ನೆರವಾಗಿದ್ದರು. ಇದು ಅವರ ವೃತ್ತಿಜೀವನದ ಹೈಲೈಟ್ಸ್‌ನಲ್ಲಿ ಒಂದಾಗಿದೆ.
ಲಾಲ್ ನಿವೃತ್ತಿಯ ನಂತರ ವೀಕ್ಷಕವಿವಣೆಗಾರರಾಗಿ ಪ್ರಸಿದ್ದಿ ಪಡೆದಿದ್ದರು. ಇದೀಗ ಅವರು ಎರಡು ತಿಂಗಳ ಬಳಿಕ ಕಾಮೆಂಟೆರಿ ಬಾಕ್ಸ್‌ಗೆ ಮರಳುವ ಸಾಧ್ಯತೆಯಿದೆ. ....