ಇಂದು ಗುಜರಾತ್ ಲಯನ್ಸ್‌ಗೆ ಆರ್‌ಸಿಬಿ ಸವಾಲು
ರಾಜ್‌ಕೋಟ್, ಎ.23: ಇದೇ ಮೊದಲ ಬಾರಿ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಗುಜರಾತ್ ಲಯನ್ಸ್ ತಂಡ ರವಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಸುರೇಶ್ ರೈನಾ ನಾಯಕತ್ವದ ಗುಜರಾತ್ ಮೊದಲ ಮೂರು ಪಂದ್ಯಗಳಲ್ಲಿ ಪಂಜಾಬ್, ಪುಣೆ ಹಾಗೂ ಮುಂಬೈ ತಂಡಗಳ ವಿರುದ್ಧ ಜಯ ಸಾಧಿಸಿ ಭರ್ಜರಿ ಆರಂಭವನ್ನು ಪಡೆದಿತ್ತು. ಆದರೆ, ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಹೀನಾಯವಾಗಿ ಸೋತಿತ್ತು.
ಆರ್‌ಸಿಬಿಯ ದುರ್ಬಲ ಬೌಲಿಂಗ್ ಪಡೆ ಹಾಗೂ ಸ್ಫೋಟಕ ಆರಂಭಿಕ ದಾಂಡಿಗ ಕ್ರಿಸ್ ಗೇಲ್‌ರ ಅನುಪಸ್ಥಿತಿಯ ಲಾಭ ಪಡೆದು ಗೆಲುವಿನ ಹಳಿಗೆ ಮರಳಲು ಗುಜರಾತ್ ಯೋಜನೆ ರೂಪಿಸುತ್ತಿದೆ. ಗುಜರಾತ್‌ನ ಬ್ಯಾಟಿಂಗ್ ಸರದಿಯಲ್ಲಿ ಆ್ಯರೊನ್ ಫಿಂಚ್, ಬ್ರೆಂಡನ್ ಮೆಕಲಮ್, ರೈನಾ, ಡ್ವೇಯ್ನೆ ಬ್ರಾವೊ ಹಾಗೂ ದಿನೇಶ್ ಕಾರ್ತಿಕ್‌ರಿದ್ದಾರೆ.
ಮೆಕಲಮ್ ಇನ್ನಷ್ಟೇ ಆರ್ಭಟಿಸಬೇಕಾಗಿದೆ. ಫಿಂಚ್ ಮೊದಲ 3 ಪಂದ್ಯಗಳಲ್ಲೂ ಅರ್ಧಶತಕ ಸಿಡಿಸಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಖಾತೆ ತೆರೆಯಲು ವಿಫಲರಾಗಿದ್ದರು. ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿರುವ ಆರ್‌ಸಿಬಿ ವಿರುದ್ಧ ಫಿಂಚ್-ಮೆಕಲಮ್ ಜೋಡಿ ತಂಡಕ್ಕೆ ಉತ್ತಮ ಆರಂಭ ನೀಡುತ್ತಾರೋ ಎಂದು ಕಾದು ನೋಡಬೇಕಾಗಿದೆ.
ಇಲ್ಲಿನ ಎಸ್‌ಸಿಎ ಸ್ಟೇಡಿಯಂ ಸೀಮರ್‌ಗಳ ಸ್ನೇಹಿಯಲ್ಲ. ಆದಾಗ್ಯೂ, ಗುಜರಾತ್ ತಂಡ ಡೇಲ್ ಸ್ಟೇಯ್ನ ಬದಲಿಗೆ ಜೇಮ್ಸ್ ಫಾಕ್ನರ್ ಅಥವಾ ಡ್ವೇಯ್ನ್ ಸ್ಮಿತ್ ಕಣಕ್ಕಿಳಿಯುವ ಸಾಧ್ಯತೆಯಿದೆ.
ಮತ್ತೊಂದೆಡೆ, ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಟೂರ್ನಿಯಲ್ಲಿ ತಲಾ 2ರಲ್ಲಿ ಜಯ ಹಾಗೂ ಸೋಲು ಅನುಭವಿಸಿ ಮಿಶ್ರ ಫಲಿತಾಂಶ ದಾಖಲಿಸಿದೆ. ಆರ್‌ಸಿಬಿ ಪರ ಕೊಹ್ಲಿ 4 ಇನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕಗಳ ಸಹಿತ ಒಟ್ಟು 267 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಕೊಹ್ಲಿಯ ಸಹ ಆಟಗಾರ ಡಿವಿಲಿಯರ್ಸ್ 4 ಪಂದ್ಯಗಳಲ್ಲಿ ಒಟ್ಟು 249 ರನ್ ಗಳಿಸಿದ್ದಾರೆ. ಬೌಲಿಂಗ್ ವಿಭಾಗ ಆರ್‌ಸಿಬಿಯ ಮುಖ್ಯ ಸಮಸ್ಯೆ. ಡೆಲ್ಲಿ ಹಾಗೂ ಮುಂಬೈ ವಿರುದ್ಧದ ಪಂದ್ಯದಲ್ಲಿ ಬೌಲರ್‌ಗಳು ದುಬಾರಿ ಆಗಿದ್ದರು.
ಪಂದ್ಯದ ಸಮಯ: ಸಂಜೆ 4:00