×
Ad

ಭಾರತದ ರೋವರ್ ದತ್ತು ಒಲಿಂಪಿಕ್ಸ್‌ಗೆ ಅರ್ಹತೆ

Update: 2016-04-25 23:18 IST

 ಹೊಸದಿಲ್ಲಿ, ಎ.25: ಭಾರತದ ರೋವರ್ ಪಟು ದತ್ತು ಭೋಕನಲ್ 2016ರ ಏಷ್ಯನ್ ಒಶಿಯಾನಿಯಾ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪುರುಷರ ಸಿಂಗಲ್ಸ್ ಸ್ಕಲ್ಸ್ ವಿಭಾಗದ ಫೈನಲ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸುವ ಮೂಲಕ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ದಕ್ಷಿಣ ಕೊರಿಯಾದ ಚುಂಗ್-ಜುನಲ್ಲಿ ನಡೆದ ಪುರುಷರ ಸ್ಕಲ್ಸ್‌ನ 2 ಕಿಮೀ ದೂರದ ಸ್ಪರ್ಧೆಯಲ್ಲಿ 7 ನಿಮಿಷ 07.49 ಸೆಕೆಂಡ್‌ನಲ್ಲಿ ಗುರಿ ತಲುಪಿದ 25ರ ಹರೆಯದ ಸೈನಿಕ ದತ್ತು ಎರಡನೆ ಸ್ಥಾನ ಪಡೆದರು. ಈ ಸಾಧನೆಯೊಂದಿಗೆ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಫೈನಲ್ ಸುತ್ತಿನಲ್ಲಿ ಅಗ್ರ 7 ಸ್ಪರ್ಧಿಗಳು ರಿಯೋ ಗೇಮ್ಸ್‌ಗೆ ಅರ್ಹತೆ ಪಡೆಯುತ್ತಾರೆ.

ಭಾರತ ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್ ಸ್ಪರ್ಧೆಯಲ್ಲಿ ರಿಯೋ ಗೇಮ್ಸ್‌ನಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ. ಭಾರತದ ಡಬಲ್ ಸ್ಕಲ್ಸ್ ಜೋಡಿ ವಿಕ್ರಂ ಸಿಂಗ್ ಹಾಗೂ ರೂಪೇಂದ್ರ ಸಿಂಗ್ ಫೈನಲ್ ಸುತ್ತಿನಲ್ಲಿ 5ನೆ ಸ್ಥಾನ ಪಡೆದರು. ಈ ವಿಭಾಗದಲ್ಲಿ ಅಗ್ರ ಮೂವರು ಆಟಗಾರರು ಮಾತ್ರ ಮುಂದಿನ ಸುತ್ತಿಗೇರುತ್ತಾರೆ.

ಕಳೆದ ವರ್ಷ ಚೀನಾದಲ್ಲಿ ನಡೆದ ಏಷ್ಯನ್ ರೋವಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ಸ್ಕಲ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವುದು ದತ್ತು ಭೋಕನಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡಿರುವ ಈ ವರೆಗಿನ ಮಹತ್ವದ ಸಾಧನೆಯಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News