ಇಂದು ಸನ್‌ರೈಸರ್ಸ್ ಹೈದರಾಬಾದ್‌ಗೆ ದುರ್ಬಲ ಪುಣೆ ಎದುರಾಳಿ

Update: 2016-04-25 17:49 GMT

ಹೈದರಾಬಾದ್, ಎ.25: ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಸತತ ಸೋಲಿನಿಂದ ಕಂಗೆಟ್ಟಿರುವ ರೈಸಿಂಗ್ ಪುಣೆ ಸೂಪರ್‌ಜಯಿಂಟ್ಸ್ ತಂಡವನ್ನು ಮಂಗಳವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

ಮೊದಲ ಎರಡು ಪಂದ್ಯಗಳ ಸೋಲಿನಿಂದ ಬೇಗನೆ ಚೇತರಿಸಿಕೊಂಡ ಸನ್‌ರೈಸರ್ಸ್ ತಂಡ ಮುಂಬೈ ಇಂಡಿಯನ್ಸ್(7 ವಿಕೆಟ್), ಗುಜರಾತ್‌ಲಯನ್ಸ್(10 ವಿಕೆಟ್) ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್(5 ವಿಕೆಟ್) ವಿರುದ್ಧ ಗೆಲುವು ಸಾಧಿಸಿದೆ.

ಐದು ಪಂದ್ಯಗಳಲ್ಲಿ ಆರು ಅಂಕವನ್ನು ಗಳಿಸಿರುವ ಸನ್‌ರೈಸರ್ಸ್ ಐಪಿಎಲ್ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ಪ್ರಮುಖ ಆಟಗಾರರಾದ ಯುವರಾಜ್ ಸಿಂಗ್, ಆಶೀಷ್ ನೆಹ್ರಾ ಹಾಗೂ ಕೇನ್ ವಿಲಿಯಮ್ಸನ್ ಗಾಯಗೊಂಡಿರುವ ಹೊರತಾಗಿಯೂ ಕಳೆದ ಮೂರು ಪಂದ್ಯಗಳಲ್ಲಿ ಸನ್‌ರೈಸರ್ಸ್ ಸಂಘಟಿತ ಪ್ರದರ್ಶನ ನೀಡಿದೆ.

ಸನ್‌ರೈಸರ್ಸ್ ನಾಯಕ ಹಾಗೂ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಶ್ರೇಷ್ಠ ಫಾರ್ಮ್‌ನಲ್ಲಿದ್ದಾರೆ. 5 ಪಂದ್ಯಗಳಲ್ಲಿ 4 ಅರ್ಧಶತಕವಿರುವ 294 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ. ವಾರ್ನರ್ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ(367) ಬಳಿಕ ಎರಡನೆ ಸ್ಥಾನದಲ್ಲಿದ್ದಾರೆ.

ಆರಂಭಿಕ ದಾಂಡಿಗ ಶಿಖರ್ ಧವನ್ ಮೊದಲ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಗುಜರಾತ್ ಲಯನ್ಸ್ ವಿರುದ್ಧ ಔಟಾಗದೆ 53 ಹಾಗೂ ಪಂಜಾಬ್ ವಿರುದ್ಧ 45 ರನ್ ಗಳಿಸಿ ಮೊದಲಿನ ಲಯ ಕಂಡುಕೊಂಡಿದ್ದಾರೆ. ಇನ್ನಿತರ ಬ್ಯಾಟ್ಸ್‌ಮನ್‌ಗಳಾದ ಮೊಸಿಸ್ ಹೆನ್ರಿಕ್ಸ್, ಇಯಾನ್ ಮಾರ್ಗನ್, ನಮನ್ ಓಜಾ ನಿರ್ಣಾಯಕ ಪರಿಸ್ಥಿತಿಯಲ್ಲಿ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ.

ನೆಹ್ರಾ ಅನುಪಸ್ಥಿತಿಯಲ್ಲಿ ಸನ್‌ರೈಸರ್ಸ್ ತಂಡದ ಬೌಲಿಂಗ್ ವಿಭಾಗವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಭುವನೇಶ್ವರ ಕುಮಾರ್ 5 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಪಡೆದು ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ 2ನೆ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶದ ಯುವ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ಅತ್ಯುತ್ತಮ ಪ್ರದರ್ಶನದಿಂದ ಗಮನ ಸೆಳೆಯತ್ತಿದ್ದಾರೆ.

ಮಿತವ್ಯಯಿ ಎನಿಸಿರುವ ಮುಸ್ತಫಿಝುರ್ರಹ್ಮಾನ್ ಈ ತನಕ 7 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಮತ್ತೊಂದೆಡೆ, ಎಂಎಸ್ ಧೋನಿ ನೇತೃತ್ವದ ಪುಣೆ ತಂಡ 5 ಪಂದ್ಯಗಳ ಪೈಕಿ ಕೇವಲ ಎರಡರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಏಳನೆ ಸ್ಥಾನದಲ್ಲಿದೆ. ಟೂರ್ನಿಯ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದ್ದ ಪುಣೆ ಆ ನಂತರ ಗುಜರಾತ್ ಲಯನ್ಸ್, ಪಂಜಾಬ್, ಆರ್‌ಸಿಬಿ ಹಾಗೂ ಕೋಲ್ಕತಾ ವಿರುದ್ಧ ಸತತ ಸೋಲು ಕಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಭಾರೀ ಯಶಸ್ಸು ಸಾಧಿಸಿದ್ದ ಧೋನಿ ಈ ಬಾರಿ ಹೊಸ ಜರ್ಸಿಯಲ್ಲಿ ಹಿಂದಿನ ಉತ್ತಮ ಪ್ರದರ್ಶನವನ್ನು ಪುನರಾವರ್ತಿಸಲು ವಿಫಲರಾಗಿದ್ದಾರೆ. ತಂಡದಲ್ಲಿ ಸ್ಟೀವ್ ಸ್ಮಿತ್, ಎಫ್‌ಡು ಪ್ಲೆಸಿಸ್, ಅಜಿಂಕ್ಯ ರಹಾನೆ, ತಿಸ್ಸಾರ ಪೆರೇರಾ ಹಾಗೂ ಧೋನಿಯಂತಹ ಆಟಗಾರರಿದ್ದರೂ ತಂಡದಿಂದ ಉತ್ತಮ ಪ್ರದರ್ಶನ ಹೊರಹೊಮ್ಮುತ್ತಿಲ್ಲ.

ಪುಣೆಯ ಬೌಲಿಂಗ್ ವಿಭಾಗ ಅಸ್ಥಿರ ಪ್ರದರ್ಶನ ನೀಡುತ್ತಿದೆ. ವೇಗಿ ಇಶಾಂತ್ ಶರ್ಮ ತಂಡದಲ್ಲಿ ಸ್ಥಾನ ಗಟ್ಟಿಪಡಿಸಿಕೊಂಡಿಲ್ಲ. ಪೆರೇರಾ ಹಾಗೂ ಅಲ್ಬಿ ಮೊರ್ಕೆಲ್ ಇನ್ನಷ್ಟು ಜವಾಬ್ದಾರಿಯಿಂದ ಆಡಬೇಕಾಗಿದೆ. ತ್ರಿವಳಿ ಸ್ಪಿನ್ನರ್‌ಗಳಾದ ಆರ್.ಅಶ್ವಿನ್, ಎಂ. ಅಶ್ವಿನ್ ಹಾಗೂ ಅಂಕಿತ ಶರ್ಮರ ಪ್ರದರ್ಶನ ಅನಿಶ್ಚಿತವಾಗಿದೆ.

ಪಂದ್ಯದ ಸಮಯ: ರಾತ್ರಿ 8:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News