×
Ad

ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಲು ಭಾರತ ಮೂಲದ ಕುಸ್ತಿಪಟು ವಿನೋದ್ ಸಜ್ಜು

Update: 2016-04-26 23:40 IST

ಮೆಲ್ಬೋರ್ನ್, ಎ.26: ಭಾರತ ಮೂಲದ ಕುಸ್ತಿಪಟು ವಿನೋದ್ ಕುಮಾರ್ ದಾಹಿಯಾ ರಿಯೋ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ದಾಹಿಯಾ ಗ್ರಿಕೊ-ರೊಮನ್ ಸ್ಪರ್ಧೆಯ 66 ಕೆಜಿ ತೂಕ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಹರ್ಯಾಣದ ಖಾಂದ ಎಂಬ ಕುಗ್ರಾಮದ ವಿನೋದ್ ಕಳೆದ ವರ್ಷವಷ್ಟೇ ಆಸ್ಟ್ರೇಲಿಯದ ಪೌರತ್ವ ಪಡೆದಿದ್ದರು. ಇದೀಗ ಅವರು ಆಗಸ್ಟ್‌ನಲ್ಲಿ ಬ್ರೆಝಿಲ್‌ನಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯವನ್ನು ಮೊದಲ ಬಾರಿ ಪ್ರತಿನಿಧಿಸಲು ಸಜ್ಜಾಗಿದ್ದಾರೆ.

ಅಲ್ಜೀರಿಯಾದಲ್ಲಿ ನಡೆದ ಆಫ್ರಿಕ-ಒಶಿಯಾನಿಯಾ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬೆಳ್ಳಿ ಪದಕವನ್ನು ಜಯಿಸಿರುವ 31ರ ಹರೆಯದ ದಾಹಿಯಾ ಒಲಿಂಪಿಕ್ಸ್‌ನಲ್ಲಿ ತನ್ನ ಸ್ಥಾನ ಧೃಢಪಡಿಸಿದ್ದಾರೆ.

ಅಣ್ಣನ ಹೆಜ್ಜೆಯನ್ನು ಅನುಸರಿಸಿದ ವಿನೋದ್ 8ರ ಹರೆಯದಲ್ಲೇ ಕುಸ್ತಿ ಕ್ರೀಡೆಗೆ ಕಾಲಿಟ್ಟಿದ್ದರು. ವಿನೋದ್ ಸಾಮರ್ಥ್ಯವನ್ನು ಗುರುತಿಸಿದ ಕುಟುಂಬ ಸದಸ್ಯರು ಆತನನ್ನು 1998ರಲ್ಲಿ ಹೊಸದಿಲ್ಲಿಯ ಮಹಾಬಲಿ ಸತ್ಪಾಲ್ ಕುಸ್ತಿ ಅಕಾಡಮಿಗೆ ಸೇರಿಸಿದ್ದರು. ಆ ನಂತರ ಅವರು ನಾಲ್ಕು ವರ್ಷಗಳ ಕಾಲ ರಾಜ್ಯ ಹಾಗೂ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

2010ರಲ್ಲಿ ಆಸ್ಟ್ರೇಲಿಯಕ್ಕೆ ವಲಸೆ ಹೋಗಿದ್ದ ವಿನೋದ್ ಆಸ್ಟ್ರೇಲಿಯದ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ ಕುಲ್‌ದೀಪ್ ಬಾಸ್ಸಿ ಅವರೊಂದಿಗೆ ಯುನೈಟೆಡ್ ಕುಸ್ತಿ ಕ್ಲಬ್‌ನಲ್ಲಿ ತರಬೇತಿ ಪಡೆದಿದ್ದರು. ವಿಕ್ಟೋರಿಯ ತಂಡವನ್ನು ಪ್ರತಿನಿಧಿಸಿದ್ದ ವಿನೋದ್ ಆರು ನ್ಯಾಶನಲ್ ಚಾಂಪಿಯನ್‌ಶಿಪ್, ಆಸ್ಟ್ರೇಲಿಯ ಕಪ್ ಹಾಗೂ ಕ್ಯಾನ್‌ಬೆರಾ ಕಪ್ ಟೂರ್ನಿಗಳಲ್ಲಿ ಬಹಳಷ್ಟು ಪದಕಗಳನ್ನು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News