×
Ad

ಐಪಿಎಲ್‌ನಲ್ಲಿ ಮಿಂಚಲು ವಿಫಲರಾದ ಆಸ್ಟ್ರೇಲಿಯ ಆಟಗಾರರು!

Update: 2016-04-26 23:44 IST

 ಹೊಸದಿಲ್ಲಿ, ಎ.26: ಐಪಿಎಲ್ ಫ್ರಾಂಚೈಸಿಗಳು ಆಟಗಾರರ ಹರಾಜಿನ ವೇಳೆ ಆಸ್ಟ್ರೇಲಿಯ ಆಟಗಾರರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಣೆ ಹಾಕುತ್ತಾ ಬಂದಿದ್ದಾರೆ. ಅವರು ಟೂರ್ನಿಯಲ್ಲಿ ನೀಡುತ್ತಿರುವ ಉತ್ತಮ ಪ್ರದರ್ಶನವೇ ಇದಕ್ಕೆ ಕಾರಣ. ಆದರೆ, 9ನೆ ಆವೃತ್ತಿಯ ಐಪಿಎಲ್‌ನಲ್ಲಿ ಈ ತನಕ ಆಸ್ಟ್ರೇಲಿಯ ಆಟಗಾರರು ಮಿಂಚಲು ವಿಫಲರಾಗಿದ್ದಾರೆ. ಡೇವಿಡ್ ವಾರ್ನರ್ ಹಾಗೂ ಆ್ಯರೊನ್ ಫಿಂಚ್ ಹೊರತುಪಡಿಸಿ ಉಳಿದವರ ಪ್ರದರ್ಶನ ಅತ್ಯಂತ ಕಳಪೆಯಾಗಿದೆ. ಈ ವರ್ಷದ ಐಪಿಎಲ್‌ನಲ್ಲಿ ಈವರೆಗೆ ಮಿಂಚಲು ವಿಫಲವಾಗಿರುವ ಆಸೀಸ್ ಆಟಗಾರರ ವಿವರ ಈ ಕೆಳಗಿನಂತಿದೆ.....

ಗ್ಲೆನ್ ಮ್ಯಾಕ್ಸ್‌ವೆಲ್: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡುತ್ತಿರುವ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ವರೆಗೆ ಆಡಿರುವ 5 ಪಂದ್ಯಗಳಲ್ಲಿ ಕೇವಲ 39 ರನ್ ಗಳಿಸಿದ್ದಾರೆ. 2014ರ ಆವೃತ್ತಿಯಲ್ಲಿ ಮೂರು ಬಾರಿ 90 ರನ್ ಗಳಿಸಿ ಮಿಂಚಿರುವ ಮ್ಯಾಕ್ಸ್‌ವೆಲ್ ಈ ಬಾರಿ ಯಾವುದೇ ಮ್ಯಾಜಿಕ್ ಮಾಡಿಲ್ಲ. ಪುಣೆ ವಿರುದ್ಧದ ಪಂದ್ಯದಲ್ಲಿ 14 ಎಸೆತಗಳಲ್ಲಿ ಗಳಿಸಿರುವ 32 ರನ್ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.

ಹರಾಜಿನ ಮೊತ್ತ 6 ಕೋ. ರೂ., ಈ ತನಕದ ದಾಖಲೆ: ಪಂದ್ಯಗಳು:5, ರನ್: 39, ಸರಾಸರಿ 9.75.

 ಶೇನ್ ವ್ಯಾಟ್ಸನ್: ರಾಜಸ್ಥಾನ ರಾಯಲ್ಸ್ ತಂಡದ ಯಶಸ್ಸಿನ ರೂವಾರಿಯಾಗಿದ್ದ ಶೇನ್ ವ್ಯಾಟ್ಸನ್ 2016ರ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂದಿಂದ 9.5 ಕೋಟಿ ರೂ.ಗೆ ಖರೀದಿಸಲ್ಪಟ್ಟಿದ್ದರು. ಆರ್‌ಸಿಬಿಯ ಬೌಲಿಂಗ್ ದಾಳಿಯಲ್ಲಿ ಪ್ರಮುಖ ಬೌಲರ್ ಆಗಿರುವ ವ್ಯಾಟ್ಸನ್ ತನ್ನ ಮಧ್ಯಮ ವೇಗದ ಬೌಲಿಂಗ್‌ನ ಮೂಲಕ 5 ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿದ್ದಾರೆ. ಆದರೆ, ಬ್ಯಾಟಿಂಗ್‌ನಲ್ಲಿ ಕೇವಲ 64 ರನ್ ಗಳಿಸಿ ಸಂಪೂರ್ಣ ವಿಫಲರಾಗಿದ್ದಾರೆ.

ಹರಾಜಿನ ಮೊತ್ತ: 9.5 ಕೋಟಿ., ಈವರೆಗಿನ ದಾಖಲೆ: ಪಂದ್ಯ: 5, ರನ್: 64, ಸರಾಸರಿ 16.00, ವಿಕೆಟ್ 7, ಇಕಾನಮಿ 8.05.

ಮಿಚೆಲ್ ಜಾನ್ಸನ್: ಆಸ್ಟ್ರೇಲಿಯದ ನಿವೃತ್ತ ಎಡಗೈ ವೇಗದ ಬೌಲರ್ ಜಾನ್ಸನ್ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿರುವ ಕೆಲವು ಪಂದ್ಯಗಳಲ್ಲಿ 7 ಓವರ್‌ಗಳ ಬೌಲಿಂಗ್‌ನಲ್ಲಿ 63 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. 34ರ ಹರೆಯದ ಜಾನ್ಸನ್ ಇಕಾನಮಿ ರೇಟ್ ಪ್ರತಿ ಓವರ್‌ಗೆ 9.37ರಷ್ಟಿದೆ. ಜಾನ್ಸನ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ನೀಡಿರಲಿಲ್ಲ.

ಹರಾಜಿನ ಮೊತ್ತ: 6.5 ಕೋ.ರೂ., ಈ ತನಕದ ದಾಖಲೆ: ಪಂದ್ಯ:2, ವಿಕೆಟ್:1.

ಶಾನ್ ಮಾರ್ಷ್: ಎಡಗೈ ದಾಂಡಿಗ ಶಾನ್ ಮಾರ್ಷ್ ಪಂಜಾಬ್‌ನ ಪರ ಮೊದಲ ಆವೃತ್ತಿಯ ಐಪಿಎಲ್‌ನಲ್ಲಿ 68.44ರ ಸರಾಸರಿಯಲ್ಲಿ 616 ರನ್ ಗಳಿಸಿ ಗಮನ ಸೆಳೆದಿದ್ದರು. ಆ ಬಳಿಕ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಇತ್ತೀಚೆಗೆ ಮೊಹಾಲಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಏಕಾಂಗಿ ಹೋರಾಟ ನೀಡಿ(ಔಟಾಗದೆ 56, 41 ಎಸೆತ) ತಂಡ 8 ವಿಕೆಟ್‌ಗಳ ನಷ್ಟಕ್ಕೆ 138 ರನ್ ಗಳಿಸಲು ನೆರವಾಗಿದ್ದರು.

 ಹರಾಜಿನ ಮೊತ್ತ: 2.2 ಕೋ.ರೂ., ಈವರೆಗಿನ ದಾಖಲೆ: ಪಂದ್ಯ:4, ರನ್: 81

ಜೇಮ್ಸ್ ಫಾಕ್ನರ್: ಮ್ಯಾಚ್ ವಿನ್ನಿಂಗ್ ಪ್ರದರ್ಶನದ ಮೂಲಕ ಪ್ರಸಿದ್ಧಿ ಪಡೆದಿರುವ ಆಲ್‌ರೌಂಡರ್ ಫಾಕ್ನರ್ ಈ ವರ್ಷ ಗುಜರಾತ್ ಲಯನ್ಸ್ ಪರ ಈ ತನಕ ಗರ್ಜಿಸಲು ವಿಫಲರಾಗಿದ್ದಾರೆ. 25ರ ಹರೆಯದ ಫಾಕ್ನರ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 40 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡಿದ್ದರು. ಅವರಿಗೆ ಹೆಚ್ಚು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿಲ್ಲ.

ಹರಾಜಿನ ಮೊತ್ತ: 5.5 ಕೋ.ರೂ., ಈವರೆಗಿನ ದಾಖಲೆ: ಪಂದ್ಯಗಳು 3, ಸರಾಸರಿ 7:00, ವಿಕೆಟ್: 1, ಇಕಾನಮಿ: 9.40.

ಸ್ಟೀವ್ ಸ್ಮಿತ್: ತಂಡದ ಬ್ಯಾಟಿಂಗ್ ಮುನ್ನಡೆಸುವ ಭರವಸೆಯ ಮೇಲೆ ಧೋನಿಯ ಬಯಕೆಯಂತೆ ಪುಣೆ ತಂಡವನ್ನು ಸೇರಿಕೊಂಡಿದ್ದ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿಲ್ಲ. ವಿಶ್ವದ ಶ್ರೇಷ್ಠ ದಾಂಡಿಗನಾಗಿರುವ ಸ್ಮಿತ್ ಈ ವರ್ಷದ ಐಪಿಎಲ್‌ನಲ್ಲಿ ನಿರಾಸೆ ಗೊಳಿಸಿದ್ದಾರೆ.

  ಹರಾಜಿನ ಮೊತ್ತ: 5.5 ಕೋ.ರೂ., ಈತನಕದ ದಾಖಲೆ: ಪಂದ್ಯಗಳು: 5, ರನ್: 78, ಸರಾಸರಿ 19.50.

ಮೊಸಿಸ್ ಹೆನ್ರಿಕ್ಸ್: ಹೈದರಾಬಾದ್ ಸನ್‌ರೈಸರ್ಸ್ ತಂಡದ ಖಾಯಂ ಸದಸ್ಯನಾಗಿರುವ ಆಲ್‌ರೌಂಡರ್ ಹೆನ್ರಿಕ್ಸ್ ಈ ಬಾರಿ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದಾರೆ. ಬೌಲಿಂಗ್‌ನಲ್ಲಿ 7.82ರ ಇಕಾನಮಿ ರೇಟ್‌ನಲ್ಲಿ 2 ವಿಕೆಟ್ ಪಡೆದಿದ್ದಾರೆ. ಮೂರನೆ ಕ್ರಮಾಂಕದಲ್ಲಿ ಭಡ್ತಿ ಪಡೆದು ಆಡಿದ್ದ ಹೆನ್ರಿಕ್ಸ್ ಕೇವಲ 6 ರನ್‌ಗೆ ಔಟಾಗಿದ್ದರು.

ಹರಾಜಿನ ಮೊತ್ತ: 1 ಕೋ.ರೂ., ಈತನಕದ ದಾಖಲೆ: ಪಂದ್ಯಗಳು 5, ರನ್:50, ಸರಾಸರಿ 16.66, ವಿಕೆಟ್: 2, ಇಕಾನಮಿ 7.82.

ಕೇನ್ ರಿಚರ್ಡ್‌ಸನ್: ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ ಗಂಭೀರ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದ ಹಿನ್ನೆಲೆಯಲ್ಲಿ ಆರ್‌ಸಿಬಿ ಈ ವರ್ಷದ ಐಪಿಎಲ್‌ನಲ್ಲಿ ಯುವ ವೇಗದ ಬೌಲರ್ ರಿಚರ್ಡ್‌ಸನ್ ಮೇಲೆ ವಿಶ್ವಾಸವಿರಿಸಿತ್ತು. ಈವರೆಗೆ ಅವರು ಸಾಧಾರಣ ಪ್ರದರ್ಶನ ನೀಡಿದ್ದಾರೆ.

 ಹರಾಜಿನ ಮೊತ್ತ: 2 ಕೋ.ರೂ,ಈತನಕದ ದಾಖಲೆ: ಪಂದ್ಯಗಳು: 3, ವಿಕೆಟ್:5, ಸರಾಸರಿ 18.20, ಇಕಾನಮಿ ರೇಟ್:9.10.

ಐಪಿಎಲ್‌ನಲ್ಲಿ ಈತನಕ ಅಲ್ಪ ಅವಕಾಶ ಪಡೆದಿರುವ, ಒಂದೂ ಪಂದ್ಯ ಆಡದೇ ಇರುವ ಆಸ್ಟ್ರೇಲಿಯದ ಆಟಗಾರರೆಂದರೆ: ಬ್ರಾಡ್ ಹಾಗ್(ಕೆಕೆಆರ್), ಮಿಚೆಲ್ ಮಾರ್ಷ್(ಪುಣೆ), ಜೊಯೆಲ್ ಪ್ಯಾರಿಸ್(ಡೆಲ್ಲಿ, ಗಾಯದಿಂದ ಔಟ್), ಪೀಟರ್ ಹ್ಯಾಂಡ್ಸ್‌ಕಾಂಬ್(ಪುಣೆ), ಆಡಮ್ ಝಾಂಪ(ಪುಣೆ), ಸ್ಕಾಟ್ ಬೊಲೆಂಡ್(ಪುಣೆ), ಆ್ಯಂಡ್ರು ಟೈ(ಗುಜರಾತ್), ಟ್ರೆವಿಸ್ ಹೆಡ್(ಆರ್‌ಸಿಬಿ), ಮಾರ್ಕಸ್ ಸ್ಟಾನಿಸ್(ಪಂಜಾಬ್), ಬೆನ್ ಕಟ್ಟಿಂಗ್(ಹೈದರಾಬಾದ್), ಜಾನ್ ಹೇಸ್ಟಿಂಗ್ಸ್(ಕೆಕೆಆರ್), ಕ್ರಿಸ್ ಲಿನ್(ಕೆಕೆಆರ್), ನಥನ್ ಕೌಲ್ಟರ್ ನೀಲ್(ಡೆಲ್ಲಿ ಡೇರ್ ಡೆವಿಲ್ಸ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News