×
Ad

ಆರ್‌ಸಿಬಿಗೆ ಜೋರ್ಡನ್: ಇಸಿಬಿ ಅನುಮತಿ

Update: 2016-04-26 23:47 IST

ಲಂಡನ್, ಎ.26: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ಆಲ್‌ರೌಂಡರ್ ಕ್ರಿಸ್ ಜೋರ್ಡನ್‌ಗೆ ಟ್ವೆಂಟಿ-20 ಟೂರ್ನಿ ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡಿದೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿದೇಶಿ ಆಟಗಾರ ಮಿಚೆಲ್ ಸ್ಟಾರ್ಕ್ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಜೋರ್ಡನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಸ್ಟಾರ್ಕ್ ಸಂಪೂರ್ಣ ಗುಣಮುಖವಾಗಲು ಇನ್ನೂ ಕೆಲವು ಸಮಯಬೇಕಾಗಿದೆ.

ಜೂನ್‌ನಲ್ಲಿ ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯ ತಂಡದಲ್ಲಿ ಲಭ್ಯವಿರುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯ ಹೇಳಿದೆ.

ಇತ್ತೀಚೆಗೆ ಕೋಲ್ಕತಾದಲ್ಲಿ ಕೊನೆಗೊಂಡ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಪರ ಡೆತ್ ಓವರ್‌ನಲ್ಲಿ ಅತ್ಯುತ್ತಮ ಬೌಲಿಂಗ್ ನಡೆಸಿ ಗಮನ ಸೆಳೆದಿದ್ದ ಜೋರ್ಡನ್ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 6 ವಿಕೆಟ್‌ಗಳನ್ನು ಕಬಳಿಸಿದ್ದರು. ಇಂಗ್ಲೆಂಡ್ ತಂಡ ಟೂರ್ನಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದಿತ್ತು.

ಆರ್‌ಸಿಬಿ ಇದೀಗ ತಂಡದಲ್ಲಿ ಎರಡನೆ ಬಾರಿ ಬದಲಿ ಆಟಗಾರನನ್ನು ಆಯ್ಕೆ ಮಾಡುತ್ತಿದೆ. ಕೆಲವೇ ದಿನಗಳ ಹಿಂದೆ ದಕ್ಷಿಣ ಆಫ್ರಿಕದ ಸ್ಪಿನ್ನರ್ ತಬ್ರೈಝ್ ಶಂಸಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿತ್ತು.

ಇಂಗ್ಲೆಂಡ್ ಕೌಂಟಿ ತಂಡ ಸಸ್ಸೆಕ್ಸ್‌ನ್ನು ಪ್ರತಿನಿಧಿಸುತ್ತಿರುವ ಜೋರ್ಡನ್ ಆರ್‌ಸಿಬಿ ತಂಡವನ್ನು ಸೇರಿಕೊಳ್ಳಲು ಶೀಘ್ರವೇ ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

27ರ ಹರೆಯದ ಜೋರ್ಡನ್ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದ ಕಾರಣ ಐಪಿಎಲ್‌ನಲ್ಲಿ ಲಭ್ಯವಿರಲಿದ್ದಾರೆ. ಇಸಿಬಿ ನಿರ್ದೇಶಕ ಆ್ಯಂಡ್ರೂ ಸ್ಟ್ರಾಸ್ ಐಪಿಎಲ್‌ನಲ್ಲಿ ಇಂಗ್ಲೆಂಡ್ ಆಟಗಾರರು ಭಾಗವಹಿಸುವ ಕುರಿತು ಇದೀಗ ಮೃದು ಧೋರಣೆ ತಾಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News