ಐಪಿಎಲ್ ಮೊದಲ ವಾರ ವೀಕ್ಷಕರಿಂದ ನೀರಸ ಪ್ರತಿಕ್ರಿಯೆ
ಹೊಸದಿಲ್ಲಿ, ಎ.27: ಈ ಹಿಂದಿನ ಆವೃತ್ತಿಯ ಐಪಿಎಲ್ ಟೂರ್ನಿಗೆ ಹೋಲಿಸಿದರೆ, ಈಗ ನಡೆಯುತ್ತಿರುವ ಒಂಬತ್ತನೆ ಆವೃತ್ತಿಯ ಐಪಿಎಲ್‌ನ ಮೊದಲ ವಾರದಲ್ಲಿ ಟಿವಿ ವೀಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ವರೆಗಿನ ಐಪಿಎಲ್ ಟೂರ್ನಿಯಲ್ಲಿ ಮೊದಲ ವಾರದಲ್ಲಿ ಕಂಡು ಬಂದ ಎರಡನೆ ಅತ್ಯಂತ ಕಳಪೆ ಆರಂಭ ಇದಾಗಿದೆ. 2014ರ ಆವೃತ್ತಿಯ ಮೊದಲ ವಾರದಲ್ಲಿ ವೀಕ್ಷಕರ ಸಂಖ್ಯೆಯಲ್ಲಿ ಕುಸಿತವಾಗಿತ್ತು.
ಬಾರ್ಕ್(ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ಬಿಡುಗಡೆ ಮಾಡಿರುವ ಅಂಕಿ-ಅಂಶದ ಪ್ರಕಾರ ವೀಕ್ಷಕರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ಕಂಡು ಬಂದಿದೆ. ಈ ವರ್ಷದ ಐಪಿಎಲ್ ಟೂರ್ನಿಯನ್ನು ಸೋನಿ ನೆಟ್‌ವರ್ಕ್ ಪ್ರಸಾರ ಮಾಡುತ್ತಿದೆ.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೊಚ್ಚಲ ಟೂರ್ನಿ ಆಡಿರುವ ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯವನ್ನ್ನು ವೀಕ್ಷಿಸಲು ವೀಕ್ಷಕರು 3.50 ಗಂಟೆ ವ್ಯಯಿಸಿದ್ದಾರೆ. ಆದರೆ, ಕೊಲ್ಕತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನಡುವಿನ ಪಂದ್ಯದಲ್ಲಿ ವೀಕ್ಷಕರು 2.55 ಗಂಟೆ ಮಾತ್ರ ಸಮಯ ಬಳಸಿದ್ದಾರೆ. ಇನ್ನು ಮೊದಲ ಐದು ಪಂದ್ಯಗಳಲ್ಲಿ ವೀಕ್ಷಕರು ಕಡಿಮೆ ಸಮಯವನ್ನು ಟಿವಿ ಮುಂದೆ ಕಳೆದಿದ್ದಾರೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಕಳೆದ ವರ್ಷದ ಐಪಿಎಲ್‌ಗೆ ಹೋಲಿಸಿದರೆ, ಈ ವರ್ಷ ಮೊದಲ ವಾರದಲ್ಲಿ ಐಪಿಎಲ್ ವೀಕ್ಷಕರ ಸಂಖ್ಯೆಯಲ್ಲಿ ಕುಸಿತವಾಗಿರುವುದು ಕಂಡುಬಂದಿದೆ. ಅತ್ಯಂತ ಕಡಿಮೆ ವೀಕ್ಷಕರನ್ನು ಸೆಳೆದಿದ್ದ 2014ರ ಐಪಿಎಲ್‌ಗಿಂತ 9 ಶೇ. ಹೆಚ್ಚು ವೀಕ್ಷಕರನ್ನು ಈ ಬಾರಿ ಐಪಿಎಲ್ ತನ್ನತ್ತ ಸೆಳೆದಿದೆ.
ಈ ವರ್ಷ ಇನ್ನೂ ಸಾಕಷ್ಟು ಪಂದ್ಯಗಳು ಆಡಲು ಬಾಕಿಯಿದ್ದು, ಮೊದಲ ವಾರದ ಕೆಲವೇ ಪಂದ್ಯಗಳ ಮೂಲಕ ವೀಕ್ಷಕರ ಸಂಖ್ಯೆಯನ್ನು ನಿರ್ಧರಿಸುವುದು ಸರಿಯಲ್ಲ ಎಂದು ಇಂಡಸ್ಟ್ರಿ ತಜ್ಞರು ಹೇಳಿದ್ದಾರೆ. ಆದರೆ, ಈ ವರ್ಷದ ಐಪಿಎಲ್ ವೀಕ್ಷಕರ ಸಂಖ್ಯೆಯಲ್ಲಿ ಇಳಿಕೆಯಾದ ಸಂಕೇತ ಇದಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.