ಏಷ್ಯಾ ಚಾಂಪಿಯನ್‌ಶಿಪ್: ಸೈನಾ, ಸಿಂಧು ಶುಭಾರಂಭ
ವುಹಾನ್, ಎ.27: ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸಜ್ಜಾಗುತ್ತಿರುವ ಭಾರತದ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ. ಸಿಂಧು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
ಬುಧವಾರ ಇಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಐದನೆ ಶ್ರೇಯಾಂಕದ ಸೈನಾ ಇಂಡೋನೇಷ್ಯದ ಫಿಟ್ರಿಯಾನಿ ಅವರನ್ನು 21-16, 21-17 ಗೇಮ್‌ಗಳ ಅಂತರದಿಂದ ಮಣಿಸಿದರು. ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ಇಂಡೋನೇಷ್ಯಾದ ಮಾರಿಯಾ ಫೆಬ್ ಕುಸುಮಾಸ್ಟುಟಿ ಅವರನ್ನು 21-10, 21-13 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.
ವಿಶ್ವದ ನಂ.8ನೆ ಆಟಗಾರ್ತಿ ಸೈನಾ ಮುಂದಿನ ಸುತ್ತಿನಲ್ಲಿ ಇಂಡೋನೇಷ್ಯಾದ ಲಿಂಡವೆನಿ ಫನೇತ್ರಿ ಅಥವಾ ಥಾಯ್ಲೆಂಡ್‌ನ ನಿಟ್ಚಾಯೊನ್ ಜಿಂದಾಪಾಲ್‌ರನ್ನು ಎದುರಿಸಲಿದ್ದಾರೆ. 10ನೆ ರ್ಯಾಂಕಿನಲ್ಲಿರುವ ಸಿಂಧು ಚೈನೀಸ್ ತೈಪೆಯ 8ನೆ ಶ್ರೇಯಾಂಕದ ತೈ ಝು ಯಿಂಗ್‌ರನ್ನು ಎದುರಿಸಲಿದ್ದಾರೆ.
ಜ್ವಾಲಾ-ಅಶ್ವಿನಿಗೆ ಸೋಲು: ಒಲಿಂಪಿಕ್ಸ್‌ಗೆ ಕೊನೆಯ ಅರ್ಹತಾ ಟೂರ್ನಿಯಾಗಿರುವ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಕೊರಿಯಾದ ಚಾಂಗ್ ಯೀ ನಾ ಹಾಗೂ ಲೀ ಸೋ ಹೀ ವಿರುದ್ಧ 21-15, 21-11 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ ಐದನೆ ಶ್ರೇಯಾಂಕದ ಜಪಾನ್‌ನ ಹಿರೊಯುಕಿ ಎಂಡೊ ಹಾಗೂ ಕೆನಿಚಿ ಹಯಾಕವಾ ವಿರುದ್ಧ 15-21, 13-21 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.