×
Ad

ಆರ್ಚರಿ ವಿಶ್ವಕಪ್: ವಿಶ್ವ ದಾಖಲೆ ಸರಿಗಟ್ಟಿದ ದೀಪಿಕಾ ಕುಮಾರಿ

Update: 2016-04-27 23:12 IST

ಶಾಂೈ, ಎ.27: ಶಾಂೈನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನ ಮಹಿಳೆಯರ ರಿಕರ್ವ್ ಸ್ಪರ್ಧೆಯಲ್ಲಿ ಭಾರತದ ಬಿಲ್ಗಾರ್ತಿ ದೀಪಿಕಾ ಕುಮಾರಿ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ಬುಧವಾರ ಇಲ್ಲಿ ನಡೆದ ಸ್ಪರ್ಧೆಯಲ್ಲಿ 720ರಲ್ಲಿ 686 ಅಂಕವನ್ನು ಗಳಿಸಿದ 21ರ ಹರೆಯದ ದೀಪಿಕಾ 2015ರಲ್ಲಿ ದಕ್ಷಿಣ ಕೊರಿಯಾದ ಆರ್ಚರಿ ಕೀ ಬೊ ಬೇ ನಿರ್ಮಿಸಿದ್ದ ವಿಶ್ವ ದಾಖಲೆ (720ರಲ್ಲಿ 686)ಯನ್ನು ಸರಿಗಟ್ಟಿದ್ದಾರೆ.

 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಜಯಿಸಿದ್ದ ಕೀ ಬೊ ಬೇ 2015ರಲ್ಲಿ ಗ್ವಾಂಗ್‌ಜುನಲ್ಲಿ 682 ಅಂಕವನ್ನು ಗಳಿಸುವ ಮೂಲಕ 11 ವರ್ಷಗಳಿಂದ ವಿಶ್ವ ದಾಖಲೆ ಕಾಯ್ದುಕೊಂಡಿದ್ದ ತಮ್ಮದೇ ದೇಶದ ಪಾರ್ಕ್ ಸಂಗ್ ಹ್ಯೂನ್ ದಾಖಲೆಯನ್ನು ಮುರಿದಿದ್ದರು.

ಕಳೆದ ವರ್ಷ ಕೋಪನ್‌ಹೇಗನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ದೀಪಿಕಾ ಈಗಾಗಲೇ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ದೀಪಿಕಾ 2011, 2012 ಹಾಗೂ 2013ರ ಆವೃತ್ತಿಯ ಆರ್ಚರಿ ವಿಶ್ವಕಪ್‌ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News