ನ್ಯೂಝಿಲೆಂಡ್ ಟೆಸ್ಟ್ ನಾಯಕನಾಗಿ ವಿಲಿಯಮ್ಸನ್
ವೆಲ್ಲಿಂಗ್ಟನ್, ಎ.28: ಬ್ರೆಂಡನ್ ಮೆಕಲಮ್ ನಿವೃತ್ತಿಯಿಂದಾಗಿ ತೆರವಾದ ನ್ಯೂಝಿಲೆಂಡ್‌ನ ಟೆಸ್ಟ್ ತಂಡದ ನಾಯಕನಾಗಿ ಕೇನ್ ವಿಲಿಯಮ್ಸನ್‌ರನ್ನು ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿ ಗುರುವಾರ ಆಯ್ಕೆ ಮಾಡಿದೆ.
ಕೇನ್ ತಂಡದಲ್ಲಿ ಕಳೆದ ಕೆಲವು ಸಮಯದಿಂದ ನಾಯಕನಾಗಿದ್ದರು. ಅವರು ಈಗಾಗಲೇ ತಾನೋರ್ವ ಸಮರ್ಥ ನಾಯಕನೆಂದು ಸಾಬೀತುಪಡಿಸಿದ್ದಾರೆ. ಮೈದಾನದ ಹೊರಗೆ ಹಾಗೂ ಒಳಗೆ ಎಲ್ಲರಿಂದಲೂ ಸಾಕಷ್ಟು ಗೌರವಿಸಲ್ಪಡುತ್ತಿದ್ದಾರೆ ಎಂದು ನ್ಯೂಝಿಲೆಂಡ್ ಕ್ರಿಕೆಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ವೈಟ್ ಹೇಳಿದ್ದಾರೆ.
ವಿಲಿಯಮ್ಸನ್ ನ್ಯೂಝಿಲೆಂಡ್ ತಂಡವನ್ನು 36 ಸೀಮಿತ ಓವರ್ ಪಂದ್ಯಗಳನ್ನು ನಾಯಕನಾಗಿ ಮುನ್ನಡೆಸಿದ್ದು, ಈ ಪೈಕಿ 20 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಬಲಗೈ ದಾಂಡಿಗ ವಿಲಿಯಮ್ಸನ್ ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದೊಂದು ನನಗೆ ಗೌರವ. ನಾಯಕನಾಗಿ ನನ್ನ ಸಮಯವನ್ನು ಕಳೆಯಲು ಬಯಸುವೆ. ಕಿವೀಸ್ ತಂಡ ದೊಡ್ಡ ಸಾಧನೆ ಮಾಡುವ ವಿಶ್ವಾಸ ನನಗಿದೆ ಎಂದು ವಿಲಿಯಮ್ಸನ್ ಪ್ರತಿಕ್ರಿಯಿಸಿದ್ದಾರೆ.
ನ್ಯೂಝಿಲೆಂಡ್‌ನ 29ನೆ ಟೆಸ್ಟ್ ನಾಯಕನಾಗಿ ಆಯ್ಕೆಯಾಗಿರುವ ವಿಲಿಯಮ್ಸನ್ ಈ ತನಕ 48 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 49.23ರ ಸರಾಸರಿಯಲ್ಲಿ 4,037 ರನ್ ಗಳಿಸಿದ್ದಾರೆ. ಇದರಲ್ಲಿ 13 ಶತಕಗಳು ಸೇರಿವೆ