ಆರ್‌ಸಿಬಿಗೆ ತಿರುಗೇಟು ನೀಡುವ ವಿಶ್ವಾಸದಲ್ಲಿ ಹೈದರಾಬಾದ್

Update: 2016-04-29 17:56 GMT

ಹೈದರಾಬಾದ್, ಎ.29: ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ವಿರುದ್ಧ ಶರಣಾಗಿ ಗೆಲುವಿನ ಲಯಕ್ಕೆ ಧಕ್ಕೆ ಮಾಡಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ಶನಿವಾರ ಇಲ್ಲಿ ನಡೆಯಲಿರುವ ಆರ್‌ಸಿಬಿ ವಿರುದ್ಧ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ.

ಉಭಯ ತಂಡಗಳು ಈ ಹಿಂದೆ ಮುಖಾಮುಖಿಯಾಗಿದ್ದಾಗ ಆರ್‌ಸಿಬಿ ಜಯ ಸಾಧಿಸಿತ್ತು. ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ವಿರುದ್ಧ ಸೋತ ಬಳಿಕ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಜಯ ಸಾಧಿಸಿತ್ತು.

ಹೈದರಾಬಾದ್ 6 ಪಂದ್ಯಗಳಲ್ಲಿ ಆರು ಅಂಕ ಗಳಿಸಿದೆ. ಎ.26 ರಂದು ಹೈದರಾಬಾದ್‌ನಲ್ಲಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಡಕ್‌ವರ್ತ್ ಲೂವಿಸ್ ನಿಯಮದ ಪ್ರಕಾರ ಪುಣೆ ತಂಡ ಹೈದರಾಬಾದ್‌ನ ವಿರುದ್ಧ 34 ರನ್‌ಗಳಿಂದ ಗೆಲುವು ಸಾಧಿಸಿತ್ತು. ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿರುವ ಹೈದರಾಬಾದ್ ತಂಡ ಪುಣೆ ವಿರುದ್ಧ 8 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತ್ತು. ಆರಂಭಿಕ ದಾಂಡಿಗ ಶಿಖರ್ ಧವನ್ ಏಕಾಂಗಿ ಹೋರಾಟ ನೀಡಿದ್ದರು.

 ಡೇವಿಡ್ ವಾರ್ನರ್ ಶೂನ್ಯಕ್ಕೆ ಔಟಾಗಿದ್ದರು. ಆದಿತ್ಯ ತಾರೆ,ಇಯಾನ್ ಮಾರ್ಗನ್, ದೀಪಕ್ ಹೂಡ ಹಾಗೂ ಮೊಸಿಸ್ ಹೆನ್ರಿಕ್ಸ್ ಅಲ್ಪ ಮೊತ್ತಕ್ಕೆ ಔಟಾಗಿದ್ದರು. ಬಾಲಂಗೋಚಿ ಭುವನೇಶ್ವರ ಕುಮಾರ್ 8 ಎಸೆತಗಳಲ್ಲಿ 21 ರನ್ ಗಳಿಸಿದ್ದರು.

ಹೈದರಾಬಾದ್ ತಂಡದಲ್ಲಿರುವ ನ್ಯೂಝಿಲೆಂಡ್‌ನ ಕೇನ್ ವಿಲಿಯಮ್ಸನ್ ಹಾಗೂ ಟ್ರೆಂಟ್ ಬೌಲ್ಟ್ ಈ ವರೆಗೆ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಪಡೆದಿಲ್ಲ. ಆತಿಥೇಯ ಹೈದರಾಬಾದ್ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಆಶೀಷ್ ನೆಹ್ರಾ, ಭುವನೇಶ್ವರ ಕುಮಾರ್, ಮುಸ್ತಫಿಝುರ್ರಹ್ಮಾನ್, ಬಿಪುಲ್ ಶರ್ಮ ಹಾಗೂ ಆಲ್‌ರೌಂಡರ್ ಹೆನ್ರಿಕ್ಸ್ ಗಮನಾರ್ಹ ಪ್ರದಶರ್ನ ನೀಡುತ್ತಿದ್ದಾರೆ.

ಮತ್ತೊಂದೆಡೆ, ಆರ್‌ಸಿಬಿ ಐದು ಪಂದ್ಯಗಳಲ್ಲಿ ಕೇವಲ 4 ಅಂಕವನ್ನು ಗಳಿಸಲಷ್ಟೇ ಶಕ್ತವಾಗಿದೆ. ಬೆಂಗಳೂರು ತಂಡ ಈ ತನಕ ಕೇವಲ ಎರಡರಲ್ಲಿ ಜಯ ಸಾಧಿಸಿದ್ದರೆ, ಮೂರು ಪಂದ್ಯಗಳಲ್ಲಿ ಸೋತಿದೆ.

ಕ್ರಿಸ್ ಗೇಲ್ ವೈಯಕ್ತಿಕ ಕಾರಣದಿಂದ ತವರಿಗೆ ವಾಪಸಾಗಿದ್ದರಿಂದ ಆರ್‌ಸಿಬಿ ಬ್ಯಾಟಿಂಗ್‌ನ ಶಕ್ತಿ ಕ್ಷೀಣಿಸಿದೆ. ತಂಡವು ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಪ್ರದರ್ಶವನ್ನೇ ಹೆಚ್ಚು ನೆಚ್ಚಿಕೊಂಡಿದೆ. ಈ ಇಬ್ಬರು ಆಟಗಾರರು ಪ್ರಸ್ತುತ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.

 ಶೇನ್ ವ್ಯಾಟ್ಸನ್ ಬ್ಯಾಟ್ ಹಾಗೂ ಬಾಲ್‌ನಲ್ಲಿ ಕಾಣಿಕೆ ನೀಡುತ್ತಿದ್ದಾರೆ. ಯುವ ದಾಂಡಿಗ ಸರ್ಫರಾಝ್ ಅಹ್ಮದ್ ಅವಕಾಶ ಸಿಕ್ಕಿದಾಗಲೆಲ್ಲಾ ಅಬ್ಬರಿಸಿದ್ದಾರೆ. ಆದರೆ, ಆರ್‌ಸಿಬಿಯ ಬೌಲಿಂಗ್ ವಿಭಾಗವೇ ದುರ್ಬಲವಾಗಿದೆ. ಯುಝ್ವೇಂದರ್ ಚಾಹಲ್, ಕೇನ್ ರಿಚರ್ಡ್‌ಸನ್, ಇಕ್ಬಾಲ್ ಅಬ್ದುಲ್ಲಾ ಹಾಗೂ ವ್ಯಾಟ್ಸನ್ ಈ ತನಕ ಎದುರಾಳಿ ತಂಡಕ್ಕೆ ಸವಾಲಾಗಲು ವಿಫಲರಾಗಿದ್ದಾರೆ.

ಪಂದ್ಯ ಆರಂಭದ ಸಮಯ: ರಾತ್ರಿ 8:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News