×
Ad

ಫೆಡರೇಶನ್ ಕಪ್: ಟಿಂಟು ಲುಕಾಗೆ ಚಿನ್ನ

Update: 2016-04-30 23:10 IST

ಹೊಸದಿಲ್ಲಿ, ಎ.30: ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಓಟಗಾರ್ತಿ ಟಿಂಟು ಲೂಕಾ ಫೆಡರೇಶನ್ ಕಪ್ ನ್ಯಾಶನಲ್ ಅಥ್ಲೆಟಿಕ್ಸ್ ಟೂರ್ನಿಯಲ್ಲಿ ವನಿತೆಯರ 800 ಮೀ. ಓಟದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ.

ರೈಲ್ವೇಸ್‌ನ್ನು ಪ್ರತಿನಿಧಿಸುತ್ತಿರುವ ಏಷ್ಯನ್ ಚಾಂಪಿಯನ್ ಲೂಕಾ ಶನಿವಾರ ಇಲ್ಲಿ ನಡೆದ ಮೂರನೆ ಹಾಗೂ ಅಂತಿಮ ದಿನದ ಸ್ಪರ್ಧೆಯಲ್ಲಿ 2:01.84 ನಿಮಿಷದಲ್ಲಿ ಗುರಿ ತಲುಪಿದರು. 18 ವರ್ಷಗಳ ಹಿಂದೆ ಜ್ಯೋರ್ತಿಮಯಿ ಸಿಕ್ದರ್ ನಿರ್ಮಿಸಿದ್ದ ದಾಖಲೆ(2:01.84ಸೆ.)ಯನ್ನು ಸರಿಗಟ್ಟಿದ್ದಾರೆ.

ತಮಿಳುನಾಡಿನ ಗೋಮತಿ ಮಾರಿಮುತ್ತು(2:06.45) ಬೆಳ್ಳಿ ಹಾಗೂ ಪ.ಬಂಗಾಳದ ಶಿಪ್ರಾ ಸರ್ಕಾರ್(2:06.95) ಕಂಚಿನ ಪದಕ ಜಯಿಸಿದರು.

ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವತ್ತ ಚಿತ್ತವಿರಿಸಿದ್ದ ಮಹಿಳಾ ಟ್ರಿಪಲ್ ಜಂಪ್ ಪಟು ಮಯೂಕಾ ಜಾನಿ ಮೊದಲ ಯತ್ನದಲ್ಲಿ ಗಾಯಗೊಂಡಿದ್ದಾರೆ. ಗಾಯದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ರೆಂಜಿತ್ ಮಹೇಶ್ವರಿ 16.47 ಮೀ. ದೂರ ಜಿಗಿದು ಚಿನ್ನದ ಪದಕ ಜಯಿಸಿದರು. ಸರ್ವಿಸಸ್‌ನ ಅರಿವು ಸೆಲ್ವಂ(16.00ಮೀ.) ಬೆಳ್ಳಿ ಹಾಗೂ ಅರ್ಪಿಂದರ್ ಸಿಂಗ್(15.99ಮೀ.) ಕಂಚಿನ ಪದಕವನ್ನು ಜಯಿಸಿದ್ದಾರೆ.

ಪುರುಷರ 800 ಮೀ. ಓಟದಲ್ಲಿ 1:47.56 ನಿಮಿಷದಲ್ಲಿ ಗುರಿ ತಲುಪಿದ ಕೇರಳ ಜಿನ್ಸನ್ ಜಾನ್ಸನ್ ಚಿನ್ನದ ಪದಕ ಗೆದ್ದುಕೊಂಡರು. ಹರ್ಯಾಣದ ಲಲಿತ್ ಮಾಥುರ್(1:47.90) ಹಾಗೂ ಸಾಜೀಶ್ ಜೋಸೆಫ್(1:47.96) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News