×
Ad

ರಿಯೋ ಗೇಮ್ಸ್‌ಗೆ ಸಚಿನ್ ತೆಂಡುಲ್ಕರ್ ರಾಯಭಾರಿ

Update: 2016-05-03 22:33 IST

ಹೊಸದಿಲ್ಲಿ, ಮೇ 3: ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ದೇಶದ ಸದ್ಬಾವನಾ ರಾಯಭಾರಿ ಆಗುವಂತೆ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್(ಐಒಎ) ನೀಡಿರುವ ಆಹ್ವಾನವನ್ನು ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಸ್ವೀಕರಿಸಿದ್ದಾರೆ.

ತೆಂಡುಲ್ಕರ್ ಐಒಎಯಿಂದ ಆಯ್ಕೆಯಾಗಿರುವ ಮೂರನೆ ರಾಯಭಾರಿ ಆಗಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಖ್ಯಾತ ಶೂಟರ್ ಅಭಿನವ್ ಬಿಂದ್ರಾ ಈಗಾಗಲೇ ಒಲಿಂಪಿಕ್ಸ್ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ.

ಎ.29 ರಂದು ಬ್ಯಾಟಿಂಗ್ ದಂತಕತೆ ತೆಂಡುಲ್ಕರ್‌ಗೆ ಒಲಿಂಪಿಕ್ಸ್ ರಾಯಭಾರಿ ಆಗುವಂತೆ ಆಹ್ವಾನ ನೀಡಲಾಗಿತ್ತು. ಅವರು ನಮ್ಮ ಕೋರಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಐಒಎ ಮಂಗಳವಾರ ದೃಢಪಡಿಸಿದೆ.

''ಒಲಿಂಪಿಕ್ಸ್‌ನ ರಾಯಭಾರಿ ಆಗಿ ತೆಂಡುಲ್ಕರ್ ಅವರಂತಹ ಕ್ರೀಡಾಪಟುಗಳು ನಮ್ಮ್‌ಂದಿಗಿರುವುದು ನಮಗೆಲ್ಲರಿಗೂ ಸಂತೋಷದ ವಿಚಾರವಾಗಿದೆ. ನಾವು ಅವರಿಗೆ ಆಭಾರಿಯಾಗಿದ್ದೇವೆ'' ಎಂದು ಐಒಎ ಕಾರ್ಯದರ್ಶಿ ರಾಜೀವ್ ಮೆಹ್ತಾ ಪಿಟಿಐಗೆ ತಿಳಿಸಿದ್ದಾರೆ.

ಸಲ್ಮಾನ್‌ಖಾನ್‌ರನ್ನು ಒಲಿಂಪಿಕ್ಸ್‌ಗೆ ರಾಯಭಾರಿ ಆಗಿ ನೇಮಕ ಮಾಡಿರುವುದಕ್ಕೆ ಎಲ್ಲೆಡೆಯಿಂದ ಟೀಕೆಗಳು ವ್ಯಕ್ತವಾದ ನಂತರ ಐಒಎ ಬಿಂದ್ರಾ, ತೆಂಡುಲ್ಕರ್ ಹಾಗೂ ಖ್ಯಾತ ಸಂಗೀತ ನಿರ್ದೇಶಕರ ಎ.ಆರ್. ರಹ್ಮಾನ್‌ಗೆ ರಾಯಭಾರಿ ಆಗುವಂತೆ ಆಹ್ವಾನ ನೀಡಿತ್ತು.

''ರಹ್ಮಾನ್ ನಮ್ಮಾಂದಿಗೆ ಇನ್ನೂ ಮಾತನಾಡಿಲ್ಲ. ಅವರು ನಮ್ಮ ಆಹ್ವಾನವನ್ನು ಸ್ವೀಕರಿಸುವ ವಿಶ್ವಾಸದಲ್ಲಿದ್ದೇವೆ''ಎಂದು ರಾಜೀವ್ ಮೆಹ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News