ಕೆಕೆಆರ್‌ಗೆ ಇಂದು ಪಂಜಾಬ್ ಸವಾಲು

Update: 2016-05-03 17:09 GMT

ಕೋಲ್ಕತಾ, ಮೇ 3: ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ತವರು ಮೈದಾನದಲ್ಲಿ ಬುಧವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ.

ಕಳೆದ ಮೂರು ವಾರಗಳಲ್ಲಿ ಕೆಕೆಆರ್ ತಂಡ ಆಡಿರುವ ಏಳು ಪಂದ್ಯಗಳ ಪೈಕಿ ಆರು ಪಂದ್ಯಗಳನ್ನು ತವರಿನಿಂದ ಹೊರಗೆ ಆಡಿದ್ದು, ಈ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿದೆ.

 ಬೆಂಗಳೂರಿನಲ್ಲಿ ಯೂಸುಫ್ ಪಠಾಣ್ ಪರಾಕ್ರಮದಿಂದ ಆರ್‌ಸಿಬಿಯನ್ನು ಐದು ವಿಕೆಟ್‌ಗಳ ಅಂತರದಿಂದ ಮಣಿಸಿ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿಕೊಂಡಿರುವ ಕೆಕೆಆರ್ ತಂಡ ಗುಜರಾತ್ ಲಯನ್ಸ್‌ನ್ನು ಮಣಿಸಿ ಶಾಕ್ ನೀಡಿದ್ದ ಪಂಜಾಬ್ ಸವಾಲನ್ನು ಎದುರಿಸಲು ಸಜ್ಜಾಗಿದೆ.

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ತಂಡದ ಗೆಲುವಿಗೆ 6 ಓವರ್‌ಗಳಲ್ಲಿ 81 ರನ್‌ಗಳ ಅಗತ್ಯವಿತ್ತು. ಆಗ ಜೊತೆಯಾದ ರಸೆಲ್(24 ಎಸೆತ, 39 ರನ್) ಹಾಗೂ ಪಠಾಣ್(29 ಎಸೆತ, ಔಟಾಗದೆ 60) 44 ಎಸೆತಗಳಲ್ಲಿ 96 ರನ್ ಜೊತೆಯಾಟ ನಡೆಸಿ ತಂಡಕ್ಕೆ ಅಸಾಮಾನ್ಯ ಗೆಲುವು ತಂದುಕೊಟ್ಟಿದ್ದರು.

ಮತ್ತೊಂದೆಡೆ, ಹೊಸ ನಾಯಕ ಮುರಳಿ ವಿಜಯ್ ನೇತೃತ್ವದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಆಡಿದ್ದ ಪಂಜಾಬ್ 23 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು.

ಈ ವರ್ಷದ ಐಪಿಎಲ್‌ನಲ್ಲಿ ಆರು ಪಂದ್ಯಗಳಲ್ಲಿ ಐದರಲ್ಲಿ ಸೋತಿದ್ದ ಪಂಜಾಬ್ ತಂಡ ಡೇವಿಡ್ ಮಿಲ್ಲರ್‌ರ ಸ್ಥಾನಕ್ಕೆ ಮುರಳಿ ವಿಜಯ್‌ರನ್ನು ನಾಯಕನಾಗಿ ನೇಮಕ ಮಾಡಿತ್ತು. ನಾಯಕತ್ವದ ಬದಲಾವಣೆಯು ಪಂಜಾಬ್‌ನ ಪ್ರದರ್ಶನದ ಮೇಲೆ ಪರಿಣಾಮ ಬೀರಿದಂತೆ ಕಂಡು ಬಂದಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ 156 ರನ್ ಗಳಿಸಿತ್ತು. ಐದು ಎಸೆತಗಳ ಅಂತರದಲ್ಲಿ 4 ವಿಕೆಟ್‌ಗಳನ್ನು ಉರುಳಿಸಿದ್ದ ಅಕ್ಷರ್ ಪಟೇಲ್(4-21) ಪಂಜಾಬ್‌ಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಗುಜರಾತ್‌ನ ವಿರುದ್ಧ 23 ರನ್ ಅಂತರದಿಂದ ಗೆಲುವು ಸಾಧಿಸಲು ನೆರವಾಗಿದ್ದರು.

ಪಂದ್ಯದ ಸಮಯ: ರಾತ್ರಿ 8:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News