×
Ad

ಮೆಸ್ಸಿಯ ಪುಟಾಣಿ ಅಭಿಮಾನಿಗೆ ಬೆದರಿಕೆ ಕರೆ

Update: 2016-05-03 22:40 IST

ಕಾಬುಲ್, ಮೇ 3: ಅಫ್ಘಾನಿಸ್ತಾನದಲ್ಲಿರುವ ಮೆಸ್ಸಿಯ 5 ರ ಹರೆಯದ ಅಭಿಮಾನಿಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು, ಆ ಬಾಲಕನ ಕುಟುಂಬ ದೇಶ ಬಿಡುವ ಯೋಚನೆಯಲ್ಲಿದೆೆ.

ಅಫ್ಘಾನಿಸ್ತಾನದ ಈ ಪೋರನಿಗೆ ಇತ್ತೀಚೆಗೆ ಮೆಸ್ಸಿ ತನ್ನ ಹಸ್ತಾಕ್ಷರವಿರುವ ಟೀ ಶರ್ಟ್‌ನ್ನು ಕಳುಹಿಸಿಕೊಟ್ಟಿದ್ದರು. ಮೆಸ್ಸಿ ಕಳುಹಿಸಿಕೊಟ್ಟಿದ್ದ ಟೀ ಶರ್ಟ್‌ನ್ನು ಧರಿಸಿದ್ದ ಆ ಬಾಲಕ ಬಹಳಷ್ಟು ಸಂಭ್ರಮಪಟ್ಟಿದ್ದ.

''ನಮ್ಮ ಕುಟುಂಬಕ್ಕೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದು, ಅಫ್ಘಾನಿಸ್ತಾನವನ್ನು ತೊರೆಯಬೇಕಾದ ಪರಿಸ್ಥಿತಿ ಎದುರಾಗಿದೆ. ನಾವು ನೆಮ್ಮದಿಯ ಜೀವನಕ್ಕಾಗಿ ಪಾಕಿಸ್ತಾನದ ಖ್ವೆಟ್ಟಾದಲ್ಲಿ ವಾಸ್ತವ್ಯ ಹೂಡುವ ಯೋಜನೆ ಹಾಕಿಕೊಂಡಿದ್ದೇವೆ'' ಎಂದು ಬಾಲಕನ ತಂದೆ ಮುಹಮ್ಮದ್ ಆರಿಫ್ ಅಹ್ಮದಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ಲಾಸ್ಟಿಕ್ ಬ್ಯಾಗ್‌ನಿಂದ ರಚಿಸಲ್ಪಟ್ಟ ಮೆಸ್ಸಿ ಧರಿಸುವ ಬಿಳಿ-ನೀಲಿ ಬಣ್ಣದ ಟೀ ಶರ್ಟ್‌ನ್ನು ಧರಿಸಿ ಅಂತರ್‌ಜಾಲದಲ್ಲಿ ಸಂಚಲನ ಸೃಷ್ಟಿಸಿದ್ದ ಬಾಲಕ ಮುರ್ತಝಾ ಅಹ್ಮದಿ ಅರ್ಜೆಂಟೀನದ ಸೂಪರ್ ಸ್ಟಾರ್ ಮೆಸ್ಸಿಯನ್ನು ಆಕರ್ಷಿಸಿದ್ದರು. ಬಾಲಕ ಅಹ್ಮದಿಗೆ ಮೆಸ್ಸಿ ಒಂದು ಜೊತೆ ಟೀ ಶರ್ಟ್‌ನ್ನು ಕಳುಹಿಸಿಕೊಟ್ಟಿದ್ದರು. ಮೆಸ್ಸಿಯ ಮನ ಗೆದ್ದ ಈ ಬಾಲಕ ಈಗ ಕಿಡ್ನಾಪ್ ಬೆದರಿಕೆಯನ್ನು ಎದುರಿಸುತ್ತಿದ್ದಾನೆ. ನಮಗೆ ಜೀವನವೇ ಕಷ್ಟದಾಯಕವಾಗಿದೆ ಎಂದು ಆತನ ತಂದೆ ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News