×
Ad

ಒಲಿಂಪಿಕ್ಸ್ ಜ್ಯೋತಿ ಬೆಳಗಿಸಿದ ಬ್ರೆಝಿಲ್ ಅಧ್ಯಕ್ಷೆ ಡಿಲ್ಮಾ ರೌಸೆಫ್

Update: 2016-05-04 22:53 IST

ಬ್ರೆಸಿಲಿಯ, ಮೇ 4: ದೇಶದಲ್ಲಿ ತಲೆದೋರಿರುವ ತೀವ್ರತರದ ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟು ಹಾಗೂ ಜನತೆಯ ಪ್ರತಿಭಟನೆಯ ನಡುವೆ ಬ್ರೆಝಿಲ್‌ನ ಅಧ್ಯಕ್ಷೆ ಡಿಲ್ಮಾ ರೌಸೆಫ್ ಮಂಗಳವಾರ ಒಲಿಂಪಿಕ್ಸ್ ಜ್ಯೋತಿಯನ್ನು ಬೆಳಗಿಸಿದ್ದಾರೆ.

ಭ್ರಷ್ಟಾಚಾರ ಆರೋಪದಲ್ಲಿ ಸಂಸತ್‌ನಲ್ಲಿ ವಾಗ್ದಂಡನೆಯ ಭೀತಿ ಎದುರಿಸುತ್ತಿರುವ ರೌಸೆಫ್ ಇನ್ನು ಮೂರೇ ತಿಂಗಳಲ್ಲಿ ದಕ್ಷಿಣ ಅಮೆರಿಕದಲ್ಲಿ ಮೊದಲ ಬಾರಿ ನಡೆಯಲಿರುವ ಒಲಿಂಪಿಕ್ಸ್‌ನ ವೇಳೆಗೆ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳುವ ಸಂಭವವಿದೆ.

 ‘‘ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಒಲಿಂಪಿಕ್ಸ್ ಆತಿಥ್ಯವಹಿಸಿಕೊಳ್ಳಲು ಬ್ರೆಝಿಲ್ ಸಜ್ಜಾಗಿದೆ. ಅಥ್ಲೀಟ್‌ಗಳು, ತಾಂತ್ರಿಕ ಸಿಬ್ಬಂದಿ, ನಿಯೋಗದ ಮುಖ್ಯಸ್ಥರಿಗೆ, ಪ್ರವಾಸಿಗರಿಗೆ ಹಾಗೂ ಪತ್ರಕರ್ತರಿಗೆ ಭದ್ರತೆ ಒದಗಿಸಲು ಬ್ರೆಝಿಲ್ ಸಂಪೂರ್ಣ ಸಿದ್ಧವಾಗಿದೆ. ಇದೀಗ ನಮ್ಮ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸಿದೆ ಎಂದು ನಮಗೆ ತಿಳಿದಿದೆ. ಬ್ರೆಝಿಲ್ ಎಲ್ಲ ಕಠಿಣ ಪರಿಸ್ಥಿತಿ ಎದುರಿಸಲು ಶಕ್ತವಾಗಿದೆ. ನಮ್ಮ ಪ್ರಜಾಪ್ರಭುತ್ವ ಎಲ್ಲ ಸಮಸ್ಯೆಯನ್ನು ಎದುರಿಸಲಿದೆ.. ಹೋರಾಡುವುದು ಅತ್ಯಂತ ಮುಖ್ಯ. ಹೇಗೆ ಹೋರಾಡಬೇಕೆಂದು ನಮಗೆ ಗೊತ್ತಿದೆ’’ ಎಂದು ಕ್ರೀಡಾ ಜ್ಯೋತಿ ಬೆಳಗಿಸಿದ ನಂತರ ರೌಸೆಫ್ ಹೇಳಿದ್ದಾರೆ.

ಒಲಿಂಪಿಕ್ಸ್ ಜ್ಯೋತಿ ಬ್ರೆಝಿಲ್‌ನ 329 ನಗರಗಳನ್ನು ಸುತ್ತಾಡಿದ ನಂತರ ಆಗಸ್ಟ್ 5 ರಂದು ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ನಡೆಯಲಿರುವ ಮಕರಾನ ಸ್ಟೇಡಿಯಂಗೆ ತಲುಪಲಿದೆ. ರಿಲೇ ವೇಳೆ ಜನರಿಂದ ಪ್ರತಿಭಟನೆ ಎದುರಾಗುವ ಸಾಧ್ಯತೆಯಿದೆ ಎಂದು ಭದ್ರತಾ ತಜ್ಞರು ಹೇಳಿದ್ದು, ಮಂಗಳವಾರ ಬಿಗಿ ಭದ್ರತೆಯ ನಡುವೆಯೂ ನೂರಾರು ಪ್ರತಿಭಟನೆಗಾರರು ಜಮಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News