ಐಪಿಎಲ್‌ನಲ್ಲಿ ಬೆಳಕಿಗೆ ಬರುತ್ತಿರುವ ಪ್ರತಿಭಾವಂತ ಆಟಗಾರರು

Update: 2016-05-04 17:28 GMT

   ಹೊಸದಿಲ್ಲಿ, ಮೇ 4: ಪ್ರತಿಯೊಂದು ಆವೃತ್ತಿಯ ಐಪಿಎಲ್‌ನಲ್ಲೂ ಯುವ ಹಾಗೂ ಆಕರ್ಷಕ ಆಟಗಾರರು ಬೆಳಕಿಗೆ ಬರುತ್ತಿದ್ದಾರೆ. ಈ ವರ್ಷವೂ ಕೆಲವು ಪ್ರತಿಭಾವಂತ ಆಟಗಾರರು ಟೂರ್ನಿಯಲ್ಲಿ ತನ್ನ ವಿಭಿನ್ನ ಶೈಲಿ ಹಾಗೂ ಸಾಂದರ್ಭಿಕ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಆ ಪೈಕಿ 6 ಪ್ರಮುಖ ಆಟಗಾರರು ಈ ಕೆಳಗಿನಂತಿದ್ದಾರೆ.

1. ಸರ್ಫರಾಝ್ ಖಾನ್: ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸುವ ಮೊದಲೇ ಸರ್ಫರಾಝ್ ಖಾನ್ ಮುಂಬೈ ಇಂಡಿಯನ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಬೆಳಕಿಗೆ ಬಂದಿದ್ದರು. ಇತ್ತೀಚೆಗೆ ಕೊನೆಗೊಂಡ ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಶ್ರೇಷ್ಠ ದಾಂಡಿಗನಾಗಿ ಹೊರಹೊಮ್ಮಿದ್ದ ಖಾನ್ ವಿಭಿನ್ನ ಬ್ಯಾಟಿಂಗ್ ಶೈಲಿಯ ಮೂಲಕವೇ ಗಮನ ಸೆಳೆದವರು. ಪ್ರಸ್ತುತ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಆಡುತ್ತಿದ್ದಾರೆ.

 2.ರಿಷಬ್ ಪಂತ್: ಭಾರತದ ಅಂಡರ್-19 ತಂಡದ ಆಟಗಾರ ರಿಷಬ್ ಪಂತ್ ಆಕ್ರಮಣಕಾರಿ ಶೈಲಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿದ್ದಾರೆ. 2016ರ ಅಂಡರ್-19 ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧ ಅತ್ಯಂತ ವೇಗದ ಶತಕ(18 ಎಸೆತಗಳಲ್ಲಿ) ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು. ಸ್ಥಿರ ಪ್ರದರ್ಶನ ನೀಡಿ ಭಾರತ ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಲು ನೆರವಾಗಿದ್ದರು. ಆಸ್ಟ್ರೇಲಿಯದ ಮಾಜಿ ಆಟಗಾರ ಆಡಮ್ ಗಿಲ್‌ಕ್ರಿಸ್ಟ್‌ರನ್ನು ಆದರ್ಶವನ್ನಾಗಿಸಿಕೊಂಡಿರುವ ಪಂತ್ ರಣಜಿ ಟ್ರೋಫಿಯಲ್ಲಿ ದಿಲ್ಲಿ ತಂಡದ ಪರ ಆಡುತ್ತಿದ್ದಾರೆ. ಈ ವರ್ಷ ಐಪಿಎಲ್‌ಗೆ ಕಾಲಿರಿಸಿರುವ ಪಂತ್ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ 1.9 ಕೋಟಿ ರೂ.ಗೆ ಹರಾಜಾಗಿದ್ದರು. ರಾಜ್‌ಕೋಟ್‌ನಲ್ಲಿ ಮಂಗಳವಾರ ನಡೆದ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ 40 ಎಸೆತಗಳಲ್ಲಿ 69 ರನ್ ಗಳಿಸಿ ತಂಡದ ಗೆಲುವಿಗೆ ನೆರವಾಗಿದ್ದರು. ತನ್ನ ಮೂರನೆ ಐಪಿಎಲ್ ಪಂದ್ಯದಲ್ಲಿ 25 ಎಸೆತಗಳಲ್ಲಿ ಚೊಚ್ಚಲ ಐಪಿಎಲ್ ಅರ್ಧಶತಕ ಬಾರಿಸಿರುವ ಪಂತ್ ಮೊದಲೆರಡು ಪಂದ್ಯಗಳಲ್ಲಿ ಕೆಳ ಕ್ರಮಾಂಕದಲ್ಲಿ ಆಡಿ 4 ಹಾಗೂ 20 ರನ್ ಗಳಿಸಿದ್ದರು.

3. ಕ್ರುನಾಲ್ ಪಾಂಡ್ಯ: ಈ ವರ್ಷ ಐಪಿಎಲ್ ಆರಂಭವಾಗುವ ತನಕ ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ ಎಲ್ಲರಿಗೂ ಅಪರಿಚಿತರಾಗಿದ್ದರು. ಹಾಲಿ ಚಾಂಪಿಯನ್ ಮುಂಬೈ ತಂಡದ ಪರ ಆಡಲು ಆರಂಭಿಸಿದ ತಕ್ಷಣ ಈತ ಮತ್ತೊಬ್ಬ ಪಾಂಡ್ಯ ಎಂದು ಎಲ್ಲರಿಗೂ ಗೊತ್ತಾಯಿತು. ಬರೋಡದ ಪರ ಇನ್ನಷ್ಟೇ ಪ್ರಥಮ ದರ್ಜೆ ಪಂದ್ಯವನ್ನು ಆಡಬೇಕಾಗಿರುವ ಪಾಂಡ್ಯ ಫೆಬ್ರವರಿಯಲ್ಲಿ ನಡೆದ ಆಟಗಾರರ ಹರಾಜಿನ ವೇಳೆ 2.6 ಕೋ.ರೂ.ಗೆ ಮುಂಬೈ ತೆಕ್ಕೆಗೆ ಸೇರಿದ್ದರು. ಹಾರ್ದಿಕ್ ಪಾಂಡ್ಯರ ಸಹೋದರನಾಗಿರುವ ಕ್ರುನಾಲ್ ಎಡಗೈ ಸ್ಪಿನ್ ಬೌಲರ್ ಆಗಿದ್ದಾರೆ.

4. ಶಿವಿಲ್ ಕೌಶಿಕ್: ದಕ್ಷಿಣ ಆಫ್ರಿಕದ ಪಾಲ್ ಆಡಮ್ಸ್ ಅವರಂತೆಯೇ ಅತ್ಯಂತ ವಿಭಿನ್ನವಾಗಿ ಬೌಲಿಂಗ್ ಮಾಡಬಲ್ಲ ಎಡಗೈ ಬೌಲರ್ ಕೌಶಿಕ್ ಮಾಜಿ ಟೆಸ್ಟ್ ಬೌಲರ್ ಅನಿಲ್ ಕುಂಬ್ಳೆ ಕಂಪೆನಿ ಟೆನ್‌ವಿಕ್ ನಡೆಸಿದ್ದ ಪ್ರತಿಭಾನ್ವೇಷಣೆಯಲ್ಲಿ ಲಭಿಸಿದ ಆಟಗಾರ. ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್‌ ತಂಡದಲ್ಲಿ ಆಡಿದ್ದ ಕೌಶಿಕ್ ತನ್ನ ವಿಭಿನ್ನ, ವಿಲಕ್ಷಣ ಶೈಲಿಯ ಬೌಲಿಂಗ್‌ನ ಮೂಲಕ ಎದುರಾಳಿ ತಂಡದ ಆಟಗಾರರನ್ನು ದಂಗುಬಡಿಸಿದ್ದರು. ಪ್ರಸ್ತುತ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿ ಆಡುತ್ತಿರುವ ಕೌಶಿಕ್ ಈ ತನಕ ಆಡಿರುವ 3 ಪಂದ್ಯಗಳಲ್ಲಿ ಗಮನ ಸೆಳೆದಿದ್ದಾರೆ. 5. ಮುರುಗನ್ ಅಶ್ವಿನ್: ತಮಿಳುನಾಡಿನ ಲೆಗ್ ಸ್ಪಿನ್ನರ್ ಎಂ. ಅಶ್ವಿನ್‌ಗೆ ಹೊಸ ತಂಡ ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ 4.5 ಕೋಟಿ ರೂ.(ಮೂಲ ಬೆಲೆ 10 ಲಕ್ಷ ರೂ.) ನೀಡಿ ಖರೀದಿಸಿದಾಗ ಎಲ್ಲರೂ ಹುಬ್ಬೇರಿಸಿದ್ದರು. ಎಂ. ಅಶ್ವಿನ್ ತನ್ನ ಸಹ ಆಟಗಾರ ಆರ್.ಅಶ್ವಿನ್‌ಗಿಂತಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಎಂ. ಅಶ್ವಿನ್ ಈ ತನಕ ಟೂರ್ನಿಯಲ್ಲಿ 7 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಮತ್ತೊಂದು ದೇಶೀಯ ಟೂರ್ನಿ ಸೈಯದ್ ಮುಶ್ತಾಕ್ ಅಲಿ ಟ್ರೋಫಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಎಂ. ಅಶ್ವಿನ್ ಈ ತನಕ ಪ್ರಥಮ ದರ್ಜೆ ಕ್ರಿಕೆಟ್ ಆಡಿಲ್ಲ.

 6.: ಯುಝ್ವೇಂದ್ರ ಚಾಹಲ್: ಎಂ. ಅಶ್ವಿನ್‌ರಂತೆಯೇ ಲೆಗ್ ಸ್ಪಿನ್ನರ್ ಆಗಿರುವ ಚಾಹಲ್ 2011ರ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯಲ್ಲಿ ಬೆಳಕಿಗೆ ಬಂದವರು. ಅದೇ ವರ್ಷ ಮುಂಬೈ ಇಂಡಿಯನ್ಸ್‌ನ ಮೂಲಕ ಐಪಿಎಲ್‌ಗೆ ಪ್ರವೇಶಿಸಿದ್ದ ಚಾಹಲ್ ಮೂರು ವರ್ಷಗಳ ಬಳಿಕ ಆರ್‌ಸಿಬಿಯಿಂದ 10 ಲಕ್ಷ ರೂ.ಗೆ ಖರೀದಿಸಲ್ಪಟ್ಟಿದ್ದರು. ಚೆಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಈ ಆಟಗಾರ ಆರ್‌ಸಿಬಿಯ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News