ಪಾಕ್ ಕ್ರಿಕೆಟ್ ತಂಡಕ್ಕೆ ಮಿಕಿ ಅರ್ಥರ್ ಕೋಚ್

Update: 2016-05-06 17:54 GMT

 ಕರಾಚಿ, ಮೇ 6: ದಕ್ಷಿಣ ಆಫ್ರಿಕ ಹಾಗೂ ಆಸ್ಟ್ರೇಲಿಯ ತಂಡದ ಮಾಜಿ ಕೋಚ್ ಮಿಕಿ ಅರ್ಥರ್ ಪಾಕಿಸ್ತಾನ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಶುಕ್ರವಾರ ನೇಮಕಗೊಂಡಿದ್ದಾರೆ.

ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕ್ ತಂಡದ ಕಳಪೆ ಪ್ರದರ್ಶನದ ನೈತಿಕ ಹೊಣೆ ಹೊತ್ತು ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಕಾರ್ ಯೂನಿಸ್ ಉತ್ತರಾಧಿಕಾರಿಯಾಗಿ 47ರ ಹರೆಯದ ಅರ್ಥರ್ ಆಯ್ಕೆಯಾಗಿದ್ದಾರೆ. ವಕಾರ್ ರಾಜೀನಾಮೆಯ ಬಳಿಕ ಪಿಸಿಬಿ ಕೋಚ್ ಹುದ್ದೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು.

ವಸೀಂ ಅಕ್ರಂ, ರಮೀಝ್ ರಾಝಾ ಹಾಗೂ ಫೈಸಲ್ ಮಿರ್ಝಾ ಅವರಿದ್ದ ಸಮಿತಿಯು ಅರ್ಥರ್‌ರನ್ನು ಕೋಚ್ ಹುದ್ದೆಗೆ ಶಿಫಾರಸು ಮಾಡಿದೆ. ಈ ಮೊದಲು ಆಸ್ಟ್ರೇಲಿಯದ ಸ್ಟುವರ್ಟ್ ಲಾಗೆ ಕೋಚ್ ಹುದ್ದೆಯ ಪ್ರಸ್ತಾವ ನೀಡಲಾಗಿತ್ತು. ಆದರೆ, ಕೂಡಲೇ ಪಾಕ್ ಕೋಚ್ ಹುದ್ದೆ ವಹಿಸಿಕೊಳ್ಳಲು ತನ್ನಿಂದ ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.

 ದಕ್ಷಿಣ ಆಫ್ರಿಕದ ಅರ್ಥರ್ ತಮ್ಮ ದೇಶದ ಪರ 110 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. 2005 ರಿಂದ 2010ರ ತನಕ ಆಫ್ರಿಕದ ಕೋಚ್ ಆಗಿದ್ದ ಅರ್ಥರ್ ಆ ತಂಡ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ನಂ.1 ಸ್ಥಾನಕ್ಕೇರಲು ಮಾರ್ಗದರ್ಶನ ನೀಡಿದ್ದರು. ಅರ್ಥರ್ ಕೋಚ್ ಆಗಿದ್ದ ಅವಧಿಯಲ್ಲಿ ಆಫ್ರಿಕ ತಂಡ ಸತತ 13 ಏಕದಿನ ಪಂದ್ಯಗಳನ್ನು ಜಯಿಸಿತ್ತು. ಆ ಮೂಲಕ ಆಸ್ಟ್ರೇಲಿಯದ ದಾಖಲೆ ಸರಿಗಟ್ಟಿತ್ತು.

ಆಸ್ಟ್ರೇಲಿಯ ಕ್ರಿಕೆಟ್ ತಂಡದಲ್ಲಿ 2011 ರಿಂದ 2013ರ ತನಕ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಅರ್ಥರ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಢಾಕಾ ಗ್ಲಾಡಿಯೇಟರ್ಸ್‌, ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಕರಾಚಿ ಕಿಂಗ್ಸ್ ತಂಡದ ಕೋಚ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News