ಮ್ಯಾಡ್ರಿಡ್ ಓಪನ್ : ಸಾನಿಯಾ-ಹಿಂಗಿಸ್ ಫೈನಲ್‌ಗೆ

Update: 2016-05-06 17:55 GMT

ಮ್ಯಾಡ್ರಿಡ್, ಮೇ 6: ಅಗ್ರ ಶ್ರೇಯಾಂಕಿತ ಆಟಗಾರ್ತಿಯರಾದ ಸಾನಿಯಾ ಮಿರ್ಝಾ ಹಾಗೂ ಮಾರ್ಟಿನಾ ಹಿಂಗಿಸ್ ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ನಡೆದ ಡಬಲ್ಸ್ ಸೆಮಿ ಫೈನಲ್‌ನಲ್ಲಿ ಸಾನಿಯಾ-ಹಿಂಗಿಸ್ ಜೋಡಿ ವಾನಿಯಾ ಕಿಂಗ್ ಹಾಗೂ ಆಲಾ ಕುದ್ರಿಯವಸ್ತೇವಾ ವಿರುದ್ಧ 6-2, 6-0 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಸ್ಟಟ್‌ಗರ್ಟ್ ಓಪನ್‌ನಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿರುವ ಇಂಡೋ-ಸ್ವಿಸ್‌ನ ಸಾನಿಯಾ-ಹಿಂಗಿಸ್ ಸತತ ಎರಡನೆ ಬಾರಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇಂಡಿಯನ್ ಓಪನ್‌ನಲ್ಲಿ ಎರಡನೆ ಸುತ್ತಿನಲ್ಲಿ ಅಮೆರಿಕ-ರಶ್ಯದ ವಾನಿಯಾ-ಆಲಾಗೆ ಸೋತಿದ್ದ ಸಾನಿಯಾ-ಹಿಂಗಿಸ್ ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ ತಿರುಗೇಟು ನೀಡಲು ಅವಕಾಶ ನೀಡದೇ 50 ನಿಮಿಷಗಳಲ್ಲಿ ಪಂದ್ಯ ಜಯಿಸಿದರು.

 ಸಾನಿಯಾ-ಹಿಂಗಿಸ್ ಪ್ರಶಸ್ತಿ ಸುತ್ತಿನಲ್ಲಿ ಐದನೆ ಶ್ರೇಯಾಂಕದ ಕಾರೊಲಿನ್ ಗಾರ್ಸಿಯಾ ಹಾಗೂ ಕ್ರಿಸ್ಟಿನಾ ಮ್ಲಾಡೆನೊವಿಕ್‌ರನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಗಾರ್ಸಿಯಾ-ಕ್ರಿಸ್ಟಿನಾ ಜೋಡಿ ಎಲೆನಾ ವೆಸ್ನಿನಾ ಹಾಗೂ ಎಕಟೆರಿನಾ ಮಕರೋವಾ ವಿರುದ್ಧ 6-2, 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದರು. ಸಾನಿಯಾ-ಹಿಂಗಿಸ್ ಈ ವರ್ಷ ಸಿಡ್ನಿ, ಬ್ರಿಸ್ಬೇನ್, ಆಸ್ಟ್ರೇಲಿಯನ್ ಓಪನ್ ಹಾಗೂ ಸೈಂಟ್ ಪೀಟರ್ಸ್‌ಬರ್ಗ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ಮ್ಯಾಡ್ರಿಡ್ ಓಪನ್ ಜಯಿಸುವ ವಿಶ್ವಾಸದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News